You are here: Home / News & Media / ವಿಕಿಪೀಡಿಯಾದಲ್ಲಿ kannada ವಿಶ್ವಕೋಶ : ಈಗ ಆನ್ ಲೈನ್ ನಲ್ಲಿ 6 ಸಂಪುಟಗಳು ಮುಕ್ತ…ಮುಕ್ತ…….

ವಿಕಿಪೀಡಿಯಾದಲ್ಲಿ kannada ವಿಶ್ವಕೋಶ : ಈಗ ಆನ್ ಲೈನ್ ನಲ್ಲಿ 6 ಸಂಪುಟಗಳು ಮುಕ್ತ…ಮುಕ್ತ…….

by Prasad Krishna last modified Jul 18, 2014 05:19 AM
ಮೈಸೂರು ವಿಶ್ವವಿದ್ಯಾನಿಲಯದ ಮೂರು ದಶಕಗಳ ಶ್ರಮದ ಫಲವಾಗಿರುವ ` ಕನ್ನಡ ವಿಶ್ವಕೋಶ’ ಇನ್ನು ಮುಂದೆ ಅಂತರ್ಜಾಲದಲ್ಲೇ ಉಚಿತವಾಗಿ ವೀಕ್ಷಿಸಬಹುದು. ಹೌದು, ಮೈಸೂರು ವಿವಿಯ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ವಿಕಿಪೀಡಿಯಾ ಈಗ ಆನ್ ಲೈನ್ ಮೂಲಕವು ಲಭಿಸುವಂತೆ ಮಾಡಿದೆ.

Read the original published in JustKannada website on July 15, 2014 here.


ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರು ಕಂಪ್ಯೂಟರ್ ಬಟನ್ ಒತ್ತುವ ಮೂಲಕ ಇದಕ್ಕೆ ಚಾಲನೆ ನೀಡಿದರು.

ಸೆಂಟರ್ ಫಾರ್ ಇಂಟರ್ನೆಟ್ ಸೊಸೈಟಿ (ಸಿಐಎಸ್) ಸ್ವಯಂ ಸೇವಾ ಸಂಘಟನೆ ಮುಕ್ತ ಪರವಾನಗಿಯೊಂದಿಗೆ ವಿಶ್ವಕೋಶದ ಆರು ಸಂಪುಟಗಳನ್ನು ಮೊದಲ ಹಂತದಲ್ಲಿ ಅಂತರ್ಜಾಲದಲ್ಲಿ ಒದಗಿಸಲಿದೆ. ಇದಕ್ಕೆ ಕಂಪ್ಯೂಟರ್ ತಜ್ಞ ಯು.ಬಿ.ಪವನಜ ಸಹ ಸಾಥ್ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಪ್ರೊ.ಕೆ.ಎಸ್.ರಂಗಪ್ಪ, 1978-1980ರಲ್ಲಿ ನಾನು ಪಿಎಚ್ಡಿ ಮಾಡುವ ವೇಳೆ ಐಐಎಸ್ಸಿ ಗ್ರಂಥಾಲಯಕ್ಕೆ ಹೋಗಿ ಸೀಮಿತ ಪುಸ್ತಕಗಳನ್ನು ಅಧ್ಯಯನ ಮಾಡಬೇಕಾಗಿತ್ತು. ಈಗಿನದ್ದು ತಂತ್ರಜ್ಞಾನ ಯುಗ. ಎಲ್ಲವನ್ನೂ ಬೆರಳ ತುದಿಯಲ್ಲಿ ಪಡೆಯುವ ಅವಕಾಶಗಳು ಲಭ್ಯವಿವೆ. ಮೈಸೂರು ವಿವಿಯಲ್ಲಿರುವ ಜ್ಞಾನವೂ ಮುಕ್ತವಾಗಿ ಲಭ್ಯವಾಗಲಿ ಎನ್ನುವ ಸದಾಶಯ ಇಟ್ಟುಕೊಂಡು ವಿಶ್ವಕೋಶ ಅಂತರ್ಜಾಲದಲ್ಲಿ ಸಿಗುವುದಕ್ಕೆ ಒಪಿದ್ದೇವೆ. ವಿವಿ ಶತಮಾನೋತ್ಸವದ ಹೊಸ್ತಿಲಲ್ಲಿದೆ. ಇದರ ನೆನಪಿಗಾಗಿ ಎಲ್ಲಾ ವಿಶ್ವಕೋಶ ಹಾಗೂ ವಿಷಯ ವಿಶ್ವಕೋಶಗಳನ್ನು ವಿಕಿಪಿಡಿಯಾ ಮೂಲಕ ಅಂತರ್ಜಾಲಕ್ಕೆ ಅಳವಡಿಸಲಾಗುತ್ತದೆ. ಇದರಿಂದ ನಮ್ಮ ಹಿರಿಮೆಯೂ ಹೆಚ್ಚಲಿದೆ. ಇದರಿಂದ ವಿವಿಗೆ ಯಾವುದೇ ಆರ್ಥಿಕ ಹೊರೆಯಾಗದು. . ಬದಲಿಗೆ ಓದುಗರ ಸಂಖ್ಯೆ ಹೆಚ್ಚಿ. ವಿವಿ ಗೌರವವೂ ಹೆಚ್ಚಾಗುತ್ತದೆ ಎಂದು ನುಡಿದರು

ಈಗಾಗಲೇ ಮೊದಲ ಆರು ಸಂಪುಟಗಳನ್ನು ಆನ್ ಲೈನ್ ನಲ್ಲಿ ಪಡೆಯಲು ಅನುಮತಿ ನೀಡಲಾಗಿದೆ. ಉಳಿಕೆ ಸಂಪುಟ ಹಾಗೂ ವಿಷಯ ವಿಶ್ವಕೋಶಗಳನ್ನು ವಿಕಿಪಿಡಿಯಾದಲ್ಲಿ ಅಳವಡಿಸಲು ವಿಶ್ವವಿದ್ಯಾನಿಲಯದ ಅಧಿಕಾರಿಗಳು ಹಾಗೂ ಪ್ರಾಧ್ಯಾಪಕರೊಂದಿಗೆ ಚರ್ಚಿಸಿ ಅನುಮತಿ ಕೊಡುತ್ತೇವೆ ಎಂದು ತಿಳಿಸಿದರು.

ಯುಬಿ ಪವನಜ ಮಾತನಾಡಿ, ` ` ಭಾರತದ ಯಾವುದೇ ಭಾಷೆಯಲ್ಲಿ ಆಗದಷ್ಟು ಕೆಲಸ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಆಗಿದೆ. ಆ ಜ್ಞಾನವನ್ನು ಒಂದು ಕಡೆ ಇರಿಸಿದರೆ ಕೆಲವರಿಗೆ ಮಾತ್ರ ಸಿಗಬಹುದು. ಅದನ್ನೇ ಇಂಟರ್ ನೆಟ್ ನಲ್ಲಿ ಲಭ್ಯವಾಗುವಂತೆ ಮಾಡಿ ಪುನರ್ ನವೀಕರಣಗೊಳಿಸಿದರೆ ಅದರ ಮೌಲ್ಯವೂ ಹೆಚ್ಚಲಿದೆ. ಜನರಿಗೂ ಉಪಯೋಗವಾಗಲಿದೆ. ಈಗ ಎಲ್ಲಾ ವಿಷಯಗಳ ಭಾಷೆಯೂ ತಂತ್ರಜ್ಞಾನವೇ ಆಗಿದೆ. ಅದರಲ್ಲೂ ಕನ್ನಡದಲ್ಲಿ ಮಕ್ಕಳಿಗೆ ಪಠ್ಯವನ್ನು ಬಿಟ್ಟರೆ ಬೇರೆ ಯಾವ ವಿಷಯವೂ ಇಂಟರ್ ನೆಟ್ ನಲ್ಲಿ ಇಲ್ಲ. ಭಾಷೆ ಉಳಿಯುತ್ತದೆಯೇ ಎನ್ನುವ ಪ್ರಶ್ನೆ ಸದಾ ಇದ್ದೇ ಇರುತ್ತದೆ. ತಂತ್ರಜ್ಞಾನದೊಂದಿಗೆ ಕನ್ನಡ ಭಾಷೆ ಮಿಳಿತವಾದರೆ ಅದು ಜಾಗತಿಕ ಮಟ್ಟದಲ್ಲೂ ಗಮನ ಸೆಳೆಯಲಿದೆ. ಅಂಥ ಕೆಲಸ ಈಗ ಸದ್ದಿಲ್ಲದೇ ನಡೆಯುತ್ತಿದೆ ಎಂದರು.

ಸಂಸ್ಥೆ ನಿರ್ದೇಶಕ ಆರ್.ರಾಮಕೃಷ್ಣ, ಪ್ರಾಸ್ತಾವಿಕವಾಗಿ ಮಾತನಾಡಿ,. ಶತಮಾನದ ಆರಂಭದಲ್ಲಿ ಎಸ್.ಜೆ.ನರಸಿಂಹಾಚಾರ್ ವಿಶ್ವಕೋಶ ರೂಪಿಸುವುದನ್ನು ಪ್ರಸ್ತಾಪಿಸಿದ್ದರು. ಕುವೆಂಪು ಅವರು ಮೈಸೂರು ವಿವಿ ಕುಲಪತಿಯಾದಾಗ ಅದಕ್ಕೆ ಚಾಲನೆ ರೊರೆಯಿತು. ಬಳಿಕ ದೇಜಗೌ ಕುಲಪತಿಯಾಗಿ ಬರುತ್ತಲೇ ಇನ್ನಷ್ಟು ಶಕ್ತಿ ತುಂಬಿದರು. ಅದೂ ಪ್ರಕಟಣೆಯೂ ಆಯಿತು. ಜೆ.ಶಶಿಧರಪ್ರಸಾದ್ ಕಾಲದಲ್ಲಿ ಸಿಡಿ ರೂಪವನ್ನು ಪಡೆಯಿತು. ಬಹಳಷ್ಟು ವಿದ್ವಾಂಸರು ವಿಶ್ವಕೋಶ ರೂಪಿಸುವ ಹಿಂದೆ ಇದ್ದಾರೆ. ಬೇರೆ ಯಾವುದೇ ಭಾಷೆಯಲ್ಲೂ 14 ಸಂಪುಟಗಳ ವಿಶ್ವಕೋಶ ಬಂದಿಲ್ಲ. ಎಲ್ಲವೂ ಈಗ ಸಿಡಿ ರೂಪದಲ್ಲಿ ಲಭ್ಯ. ಮುಂದುವರೆದ ಭಾಗವಾಗಿ ಮುಕ್ತ ಪರವಾನಿಗೆಯೊಂದಿಗೆ ಅಂತರ್ಜಾಲದಲ್ಲಿ ಲಭ್ಯವಾಗುವಂತೆ ಮಾಡುತ್ತಿರುವುದು ವಿವಿ ಹಿರಿಮೆ ಹೆಚ್ಚಿಸಿದೆ. ಜತೆಗೆ 30 ವಿಷಯ ವಿಶ್ವಕೋಶಗಳಲ್ಲಿ 5 ಪೂರ್ಣಗೊಂಡಿವೆ. ಇನ್ನಷ್ಟು ವಿಷಯ ವಿಶ್ವಕೋಶಗಳು ಪ್ರಕಟಣೆ ಹಂತದಲ್ಲಿವೆ.` ಎಂದು ಹೇಳಿದರು.

ಸೆಂಟರ್ ಫಾರ್ ಇಂಟರ್ನೆಟ್ ಸೊಸೈಟಿಯ(ಸಿಐಎಸ್) ತೇಜಸ್ ಜೈನ್ ಮಾತನಾಡಿ, ಅಂತರ್ಜಾಲಕ್ಕೆ ವಿಶ್ವಕೋಶ ಸೇರಿ ಯಾವುದೇ ಮಾಹಿತಿ ಹಾಕಿದರೆ ಇದರಿಂದ ಪುಸ್ತಕ ವ್ಯಾಪಾರಕ್ಕೆ ಧಕ್ಕೆಯಾಗಬಹುದು ಎನ್ನುವ ಆತಂಕ ಬಹುತೇಕರಲ್ಲಿದೆ. ಇಂಥ ಅನುಮಾನ ಬೇಡ. ಪುಸ್ತಕ ಓದುವವರು ಇದ್ದೇ ಇದ್ದಾರೆ. ಅಂತರ್ಜಾಲದ ಲಭ್ಯತೆ ಹೆಚ್ಚು ಓದುಗರನ್ನು ಸೃಷ್ಟಿಸುತ್ತದೆ. ಇಂಥ ಸವಾಲುಗಳನ್ನು ಎದುರಿಸಿ ವಿಕಿಪಿಡಿಯಾಕ್ಕೆ ಮಾಹಿತಿಗಳನ್ನು ಅಪ್ಡೇಟ್ ಮಾಡಲಾಗುತ್ತಿದೆ ಎಂದು ವಿವರಿಸಿದರು.

banner
ASPI-CIS Partnership

 

Donate to support our works.

 

In Flux: a technology and policy podcast by the Centre for Internet and Society