ತರಬೇತಿ ಮಾಡಲು ತರಬೇತಿಗೊಂಡಾಗ.... CIS-A2K TTT 2016
ದಿ ಸೆಂಟರ್ ಫಾರ್ ಇಂಟರ್‌ನೆಟ್ ಆಂಡ್ ಸೊಸೈಟಿಯವರು ಬೆಂಗಳೂರಿನಲ್ಲಿ ಜೂನ್ ೧೫ ರಿಂದ ೧೭, ೨೦೧೬ ರ ತನಕ ತರಬೇತುದಾರರ ತರಬೇತಿ (Train The Trainer) ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಅದರಲ್ಲಿ ಭಾಗವಹಿಸುವ ಅವಕಾಶ ನನಗೆ ಲಭಿಸಿತ್ತು. ನನ್ನ ಅನುಭವವನ್ನು ಚಿಕ್ಕದಾಗಿ ಇಲ್ಲಿ ದಾಖಲಿಸುತ್ತಿದ್ದೇನೆ
ಗೂಡಿನಲ್ಲಿದ್ದ ನನ್ನನ್ನು ಒಮ್ಮೆಯೇ ಹೊರ ಜಗತ್ತನ್ನು ಕಾಣಲು ಬಿಟ್ಟಂಥಹ ಅನುಭವ. ಖುಷಿ, ಭಯ, ಅಳುಕು, ಮುಜುಗರ ಎಲ್ಲಾ ಒಟ್ಟಿಗೆ ಬಂದಂತಿತ್ತು. ಹೊಸ ಜಾಗ ಹೊಸ ಜನ. ಎಲ್ಲಿ ನೋಡಿದರೂ ಗುರುತಿಲ್ಲದವರು. ಅಬ್ಬಾ.... ಬೆಂಗಳೂರು...... ಎಲ್ಲಿ ನೋಡಿದರು ಟ್ರಾಫಿಕ್. ನಾನು ಬೆಂಗಳೂರು ತಲುಪುವಾಗ ಬೆಳಗ್ಗೆ 5.45 ಆ ಹೊತ್ತಿಗೆಯೇ ನನಗೆ ಟ್ರಾಫಿಕ್ ನ ಅನುಭವ ಶುರುವಾಯಿತು. ಸೇರಬೇಕಾದ ಜಾಗ ಸೇರುವಾಗ ಗಂಟೆ ಎಂಟಾಗಿತ್ತು.
ಕಾರ್ಯಕ್ರಮದ ಹಿಂದಿನ ದಿನವೇ ಬರಬೇಕೆಂಬ ಸಂದೇಶವಿತ್ತು. ಅದರಂತೆಯೇ ನಾನು ಬೇಗ ಹೋದೆ. ಉಳಿಯುವ ವ್ಯವಸ್ಥೆ ಸಿದ್ಧವಾಗಿತ್ತು. ಮೊದಲನೇಯ ದಿನಕ್ಕೆ ತಯಾರಾಗಲು ಅವಕಾಶ ಸಿಕ್ಕಿತು. ರಾತ್ರಿ ಊಟಕ್ಕೆ ಎಲ್ಲಿ ಹೋಗುವುದು ಎಂದಾಗ ಡಾ. ಪವನಜರು ಹಲವಾರು ಹೋಟೆಲ್ ಗಳ ಮಾಹಿತಿ ಕೊಟ್ಟರು. ಅಂತೂ ರಾಜಧಾನಿಗೆ ಹೋಗೋಣವೆಂದು ನಿರ್ಧರಿಸಿದೆ. ಆಹಾ... ಎಷ್ಟು ಚೆನ್ನಾಗಿದೆ ಊಟ ಎನ್ನಿಸಿತು. ಅಲ್ಲಿಯವರು ನಮ್ಮನ್ನು ಬರಮಾಡಿಕೊಂಡ ರೀತಿ ಬಹಳ ಚೆನ್ನಾಗಿತ್ತು. ತನ್ನ ಮನೆಯವರೇ ಬಂದಿದ್ದಾರೆ ಎಂಬ ಭಾವನೆ ವ್ಯಕ್ತವಾಗುತ್ತಿತ್ತು. ಊಟದ ಜೊತೆಗೆ ಅವರ ಅಥಿತಿ ಸತ್ಕಾರ, ಉಪಚಾರ ಮನಸ್ಸಿಗೆ ತೃಪ್ತಿಕೊಟ್ಟಿತು.
ಅಂತೂ ಕಾರ್ಯಕ್ರಮದ ಮೊದಲನೆ ದಿನ ಬಂತು. ಬೆಳಗ್ಗೆ 6 ಗಂಟೆಗೆ ಎದ್ದುಬಿಟ್ಟೆ. ಪ್ರೆಸೆಂಟೇಶನ್ ತಯಾರು ಮಾಡುವಂತೆ ಸೂಚಿಸಲಾಗಿತ್ತು. ಅದನ್ನು ಡಾ. ಪವನಜರ ಸಹಾಯದಿಂದ ಮೊದಲೇ ರೆಡಿಮಾಡಿದ್ದೆ. ತಿಂಡಿ ಮುಗಿಸಿ ಆಫೀಸ್ ಗೆ ಹೊರೆಟೆವು. ಬೆಳಗ್ಗೆ 9.30ಗೆ ಕಾರ್ಯಕ್ರಮ ಶುರುವಾಯಿತು. ಭಾರತದ ಹಲವು ಪ್ರದೇಶದಿಂದಲ್ಲದೇ ನೇಪಾಳ ಹಾಗು ಶ್ರೀಲಂಕಾದಿಂದ ಸಹಾ ಭಾಗವಹಿಸುವವರಿದ್ದರು. ಎಲ್ಲರನ್ನು ಒಮ್ಮೆ ನೋಡಿದೆ ಎಲ್ಲಾ ಹೊಸ ಮುಖಗಳು. ಆದರೂ ಕೆಲವರ ಬಗ್ಗೆ ಕೇಳಿಪಟ್ಟಿದ್ದೆ. ಈ ಕಾರ್ಯಕ್ರಮವು ತನ್ವೀರ್ ಹಸನ್ ಹಾಗು ಟೀಟೋ ಇವರಿಂದ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವು ವ್ಯವಸ್ಥಿತವಾಗಿ ನಡೆಯಿತು.
ಭಾಗವಹಿಸುವವರ ಪರಿಚಯ ಮಾಡಿಕೊಟ್ಟ ರೀತಿ ನನಗೆ ಬಹಳ ಸಂತೋಷಕೊಟ್ಟಿತು. ಸುಮಾರು 30 ಜನರು ನೆರೆದಿದ್ದರು. ನಮ್ಮೆಲ್ಲರನ್ನು ಗುಂಪುಗಳಾಗಿ ವಿಂಗಡಿಸಲಾಯಿತು. ನನ್ನ ಗುಂಪಿನಲ್ಲಿ ಇದ್ದವರು- ಪಂಜಾಬಿ ಹುಡುಗಿ ನಿತೇಶ್, ಶ್ರೀಲಂಕಾದ ಶಿವ, ಒರಿಸ್ಸಾದ ಶೈಲೇಶ್, ಕರ್ನಾಟದ ಗೋಪಾಲ್ ಕೃಷ್ಣ. ಇದೊಂದು ಒಳ್ಳೆಯ ಅನುಭವ ಎನಿಸಿತು. ಅವರ ಅನುಭವ ಕೇಳುವಾಗ ನಾನು ಸಹ ಹಾಗೆಯೇ ಇರಬೇಕು ಎಂದೆನಿಸಿತು. ಪ್ರೆಸೆಂಟೇಶನನ್ನು ಮೊದಲ ಗುಂಪಿನಿಂದ ಪ್ರಾರಂಭಿಸಲಾಯಿತು. ಗ್ಲೋಬಲ್ ಮಾಟ್ರಿಕ್ಸ್ ನ ಬಗ್ಗೆ ತಿಳಿಸಿದರು. ಮಧ್ಯಾಹ್ನದ ಊಟ ಬಹಳ ಅದ್ಭುತವಾಗಿತ್ತು. ಊಟದ ನಂತರ ಮತ್ತೆ ಕೆಲಸ ಮುಂದುವರೆಸಿದೆವು. ಸುಮಾರು 5 ಗಂಟೆಯವರೆಗೆ ಕಾರ್ಯಕ್ರಮ ನಡೆಯಿತು.
ಎರಡನೆ ದಿನವು ಪ್ರೆಸೆಂಟೇಶನ್ ನೊಂದಿಗೆ ಕಾರ್ಯಕ್ರಮ ಶುರುವಾಯಿತು. ನಂತರ ಡಾ. ಪವನಜರ ಪ್ರೆಸೆಂಟೇಶನ್, ಒಳ್ಳೆಯ ಪ್ರೆಸೆಂಟೇಶನ್ ಹೇಗಿರಬೇಕು ಎಂದು ತಿಳಿಸಿದರು. ಉತ್ತಮ ಪ್ರೆಸೆಂಟೇಶನ್ ಮಾಡಲು ಬೇಕಾದ ಅಂಶಗಳನ್ನು ತಿಳಿದುಕೊಂಡೆ. ಅಭಿನವ್ ಹಾಗೂ ರೆಹಮಾನ್ ರವರು ಸರ್ವೆ ಇಮ್ಪಾಕ್ಟ್ ಬಗ್ಗೆ ಹೇಳಿದರು. ಒಂದು ಕಾರ್ಯಕ್ರಮ ನಡೆಸಬೇಕಾದರೆ ಅದಕ್ಕೆ ಮುಂಚೆಯೇ ಹೇಗೆಲ್ಲಾ ತಯಾರಿ ಮಾಡಿಕೊಳ್ಳಬೇಕು ಎಂಬುದನ್ನು ಹೇಳಿಕೊಟ್ಟರು. ನಂತರ ಶುಭಾಷಿಶ್ ಹಾಗೂ ಪವನ್ ರ ಪ್ರೆಸೆಂಟೇಶನ್. ಯಾವುದೇ ಕಾರ್ಯಕ್ರಮ ನಡೆಸಿದ ನಂತರ ಅದರ ವರಿದಿಯನ್ನು ಹೇಗೆ ಮಾಡಬೇಕೆಂದು ತಿಳಿಸಿದರು. ಎಲ್ಲರು ಸಹಾ ಲವಲವಿಕೆಯಿಂದ ಪಾಲ್ಗೊಂಡಿದ್ದರು. ಕೊನೆಯಲ್ಲಿ CISನ ಕಾರ್ಯನಿರ್ವಾಹಕ ನಿರ್ದೇಶಕರಾದ ಸುನಿಲ್ ಅವರ ಅನುಭವವನ್ನು ಹೇಳಿದರು.
ಮೂರನೆಯ ದಿನ ಬಂತು. ಇದು TTT 2016ಯ ಕೊನೆಯ ದಿನವಾಗಿತ್ತು. ಅಂದು ನಾನು ಪ್ರೆಸೆಂಟೇಶನ್ ಮಾಡಬೇಕಾಗಿತ್ತು. ಮೊದಲ ಬಾರಿಗೆ ಮಾಡಿದ ಪ್ರೆಸೆಂಟೇಶನ್ ಆಗಿತ್ತು. ನಾನು ಬಹಳ ಹೆದರಿದ್ದೆ. ನನ್ನ ಗುಂಪಿನವರು ಹಾಗು ಅಲ್ಲಿದ್ದವರು ನನ್ನನ್ನು ಪ್ರೋತ್ಸಾಹಿಸಿದರು. ಹೇಗೋ ಪ್ರೆಸೆಂಟೇಶನ್ ಮುಗಿಸಿದೆ. ಒಂದು ಒಳ್ಳೆ ಅನುಭವ ಪಡೆದೆ. ನನ್ನ ಪ್ರೆಸೆಂಟೇಶನನ್ನು ಮೆಚ್ಚಿದರು. ಅದನ್ನು ಕೇಳಿ ಸಂತೋಷವಾಯಿತು, ಆದರೂ ಇನ್ನೂ ಚೆನ್ನಾಗಿ ಮಾಡಬಹುದು ಎನ್ನಿಸಿತು. ಮಧ್ಯಾಹ್ನದ ನಂತರ TTTಯಲ್ಲಿ ಭಾಗವಹಿಸಿದವರು ಹಾಗೂ MWTಯಲ್ಲಿ ಭಾಗವಹಿಸುವವರನ್ನು ಸೇರಿಸಿ ಗುಂಪು ಮಾಡಲಾಯಿತು. ನಮ್ಮ ವಿಕಿಪೀಡಿಯಗೆ ಯಾವ ವಿಷಯದಲ್ಲಿ ಬಲಾವಣೆ ಬೇಕಾಗಿದೆ ಎಂದು ಹುಡುಕಿ ಚರ್ಚಿಸಿದೆವು. ಇದರ ಬದಲಾವಣೆ ಮಾಡಲು ಸಲಹೆ ನೀಡಿದೆವು. ಕೊನೆಯಲ್ಲಿ ಎಲ್ಲರು ತಮ್ಮ ತಮ್ಮ ಅನುಭವವನ್ನು ಹೇಳಿಕೊಂಡರು.
ದಿನದಿಂದ ದಿನಕ್ಕೆ ನಾನು ಹಲವಾರು ವಿಷಯಗಳನ್ನು ಕಲಿಯುತ್ತಾ ಸಾಗುತ್ತಿರುವೆ. ವಿಕಿಪೀಡಿಯದ ಜೊತೆಗೆ ವಿಕಿಸೋರ್ಸ್ ಹಾಗೂ ವಿಕಿಡಾಟದ ಬಗ್ಗೆ ತಿಳಿದುಕೊಂಡೆ. ಇಲ್ಲಿ ಕಲಿತ ಪ್ರತಿಯೊಂದು ವಿಷಯವು ನನಗೆ ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಆಗೇ ಆಗುತ್ತದೆ. ಬಹಳ ಒಳ್ಳೆಯ ಅನುಭವವಾಯಿತು. ಇದನ್ನು ಎಂದಿಗೂ ಮರೆಯಲಾಗುವುದಿಲ್ಲ. ಇಷ್ಟಕ್ಕೆ ನನ್ನ ಪ್ರಯಾಣನ್ನು ನಿಲ್ಲಿಸದೇ ಮುಂದುವರಿಸಬೇಕೆಂಬುದೆ ನನ್ನ ಆಸೆ.
Link to the blogpost here