ಸೃಜನಶೀಲತೆಗೆ ಸಂದ ಗೌರವ

Posted by Lawrence Liang at Jun 15, 2012 12:50 PM |
ತಾಂತ್ರಿಕ ಆವಿಷ್ಕಾರಗಳು `ಕೃತಿ ಸ್ವಾಮ್ಯ` ಎಂಬ ಪರಿಕಲ್ಪನೆಯನ್ನು ಅದರ ಮಾಮೂಲು ಅರ್ಥದಲ್ಲಿ ಬಳಸಲು ಸಾಧ್ಯವಾಗದಂತೆ ಮಾಡಿವೆ. ತಡವಾಗಿಯಾದರೂ ಭಾರತದ ಸಂಸತ್ತು `ಕೃತಿ ಸ್ವಾಮ್ಯ`ದ ಹೊಸ ಅರ್ಥವನ್ನು ಪರಿಗಣಿಸುವ ತಿದ್ದುಪಡಿ ಮಸೂದೆಯೊಂದನ್ನು ಅಂಗೀಕರಿಸಿದೆ.

The article was published by Prajavani on June 9, 2012

ಹಲವು ಧನಾತ್ಮಕ ಅಂಶಗಳನ್ನು ಒಳಗೊಂಡಿರುವ ಈ ಕಾಯ್ದೆಗೆ ಸಂಬಂಧಿಸಿದಂತೆ ಕೆಲವು ಸಂಶಯಗಳಿನ್ನೂ ನಿವಾರಣೆಯಾಗಿಲ್ಲ. ಕೃತಿ ಸ್ವಾಮ್ಯ ಕಾಯ್ದೆಯ ಹೊಸ ಸ್ವರೂಪದ ಮೇಲೆ ವಿವಿಧ ಕ್ಷೇತ್ರಗಳ ತಜ್ಞರಿಲ್ಲಿ ಬೆಳಕು ಚೆಲ್ಲಿದ್ದಾರೆ.

ರಾಜ್ಯಸಭೆಯಲ್ಲಿ ಇತ್ತೀಚೆಗೆ ಕೃತಿಸ್ವಾಮ್ಯ (ಕಾಪಿರೈಟ್) ತಿದ್ದುಪಡಿ ಮಸೂದೆ ಕುರಿತು ಚರ್ಚೆ ನಡೆಯುತ್ತಿರುವಾಗ ಹಿಂದಿಯ ಪ್ರಸಿದ್ಧ ಗೀತ ರಚನೆಕಾರ ಹಾಗೂ ಬರಹಗಾರ ಜಾವೇದ್ ಅಖ್ತರ್, ಹಿರಿಯ ಚಿತ್ರ ಸಾಹಿತಿಗಳು, ಸಂಗೀತಗಾರರು, ಗೀತ ರಚನೆಕಾರರು ಅನುಭವಿಸುತ್ತಿರುವ ಕಷ್ಟ- ಕಾರ್ಪಣ್ಯದ ಬಗ್ಗೆ ಆಕ್ರೋಶದಿಂದ ಮಾತನಾಡಿದರು.

ಭಾರತೀಯ ಸಿನಿಮಾ ರಂಗದಲ್ಲಿ ಇತಿಹಾಸ ಸೃಷ್ಟಿಸಿರುವ ಚಿತ್ರಗಳಿಗೆ ಕೆಲಸ ಮಾಡಿದ ಸಾಹಿತಿಗಳು, ಗೀತ ರಚನೆಕಾರರು ಹಾಗೂ ಸಂಗೀತಗಾರರು ತಮ್ಮ ಇಳಿಗಾಲದಲ್ಲಿ ಅನುಭವಿಸುತ್ತಿರುವ ಆರ್ಥಿಕ ಸಂಕಷ್ಟಗಳ ಬಗ್ಗೆ ಬೆಳಕು ಚೆಲ್ಲುವಾಗ ಅವರ ದನಿಯಲ್ಲಿ ವಿಷಾದವಿತ್ತು.

ತಮ್ಮ  ಸೃಜನಶೀಲ ಸೃಷ್ಟಿಗಳ ಮೇಲೆ ಯಾವುದೇ ಹಕ್ಕು ಹೊಂದಿಲ್ಲದಿರುವುದೇ ಇವರೆಲ್ಲರ ಕಷ್ಟಕ್ಕೆ ಕಾರಣ. ಗೌರವಧನದ ಮೂಲಕ ಯಾವುದೇ ಲಾಭ ಇವರಿಗೆ ಬರುತ್ತಿಲ್ಲ ಎಂದು ಅಖ್ತರ್ ಹೇಳಿದರು. ಈ ವಿಚಾರ ಹೇಳುವಾಗ `ಆವಾರಾ`, `420`ಯಂತಹ ಚಿತ್ರಗಳಿಗೆ ಗೀತ ರಚನೆ ಮಾಡಿದ ಶೈಲೇಂದ್ರ ಅವರಿಗೆ ವೃದ್ಧಾಪ್ಯದಲ್ಲಿ ಔಷಧಕ್ಕೆ ನೀಡಲು ಹಣ ಇಲ್ಲದಿದ್ದುದು, `ಸೀತಾ ಔರ್ ಗೀತಾ` ಹಾಗೂ `ಸತ್ತೆ ಪೇ ಸತ್ತಾ` ಚಿತ್ರಗಳ ಕಥೆ ಬರೆದಿದ್ದ ಸತೀಶ್ ಭಟ್ನಾಗರ್ ಅನುಭವಿಸಿದ ಕಷ್ಟಗಳ ಉದಾಹರಣೆ ನೀಡಿದರು.

ಬರಹಗಾರರು, ಸಂಗೀತಗಾರರನ್ನು ದುಸ್ಥಿತಿಗೆ ತಳ್ಳಿ, ಕೇವಲ ನಿರ್ಮಾಪಕರ ಜೇಬು ತುಂಬಿಸುವ ಕಾಪಿರೈಟ್ ಕಾಯ್ದೆಯ ಬಗ್ಗೆ ಅವರಿಗೆ ಅಸಮಾಧಾನವಿತ್ತು. ಈ ವ್ಯವಸ್ಥೆಯನ್ನು ಸುಧಾರಿಸಲು  ಕಾಪಿರೈಟ್ ಕಾಯ್ದೆಗೆ ತಿದ್ದುಪಡಿ ತರುವುದು ಅತ್ಯಗತ್ಯ ಎಂದು ಅಖ್ತರ್ ಬಲವಾಗಿ ಪ್ರತಿಪಾದಿಸಿದರು.

ಜಾವೇದ್ ಅಖ್ತರ್ ಇಷ್ಟೆಲ್ಲ ಹೇಳಿದ ಮೇಲೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ `ಕೃತಿಸ್ವಾಮ್ಯ ತಿದ್ದುಪಡಿ ಮಸೂದೆ 2012`ಗೆ ಎಲ್ಲ ರಾಜಕೀಯ ಪಕ್ಷಗಳ ಸದಸ್ಯರು, ಪಕ್ಷಭೇದ ಮರೆತು ಸರ್ವಾನುಮತದಿಂದ ಒಪ್ಪಿಗೆ ನೀಡಿದ್ದರಲ್ಲಿ ಆಶ್ಚರ್ಯ ಕಾಣುವುದಿಲ್ಲ. ` ಇದು ಬರಹಗಾರರು ಹಾಗೂ ಸಂಗೀತಗಾರರ ಹಕ್ಕನ್ನು ಕಾಪಾಡುವ ತಿದ್ದುಪಡಿ` ಎಂದು ಬಣ್ಣಿಸಲಾಯಿತು.

ಕಾಪಿರೈಟ್ ಕಾಯ್ದೆಯ ವಿಚಾರ ಬಂದಾಗ ಈ ತಿದ್ದುಪಡಿ ಮಹತ್ವದ್ದು ಎಂಬುದರಲ್ಲಿ ಯಾವ ಅನುಮಾನವೂ ಬೇಡ. ತಿದ್ದುಪಡಿ ಕುರಿತು ಹೇಳುವಾಗ ಮಾಧ್ಯಮಗಳಲ್ಲಿ ಇದನ್ನು ಚಿತ್ರ ನಿರ್ಮಾಪಕರ ವಿರುದ್ಧ ಕಲಾವಿದರಿಗೆ ಸಿಕ್ಕಿದ ಜಯ ಎಂದೇ ವರ್ಣಿಸಲಾಯಿತು.
 
ಆದರೆ, ಕೃತಿಸ್ವಾಮ್ಯ ತಿದ್ದುಪಡಿ ಇನ್ನಷ್ಟು ವಿಸ್ತೃತವಾದ ವಿಚಾರಗಳನ್ನು ಹೇಳುತ್ತಿದ್ದು, ಈ ಜಯಘೋಷಗಳ ಅಬ್ಬರದ ನಡುವೆ ಅದರಲ್ಲಿನ ಸೂಕ್ಷ್ಮ ವಿಚಾರಗಳು ಯಾರ ಕಣ್ಣಿಗೂ, ಕಿವಿಗೂ ಬೀಳದೇ ಹೋಗುವ ಅಪಾಯವೂ ಇದೆ. ಈ ತಿದ್ದುಪಡಿಯಿಂದ ಕಾಪಿರೈಟ್ ಕಾಯ್ದೆಯಲ್ಲಿ ಹಲವು ಸ್ವಾಗತಾರ್ಹ ಬದಲಾವಣೆಗಳಾಗಿವೆ ನಿಜ. ಜ್ಞಾನ, ಸಂಸ್ಕೃತಿ, ತಂತ್ರಜ್ಞಾನದಂತಹ ವಿಚಾರಗಳು ಎಲ್ಲರಿಗೂ ದಕ್ಕಬೇಕು ಎಂಬ ಆಶಯ ಹೊಂದಿರುವವರನ್ನು ಚಿಂತೆಗೆ ಹಾಗೂ ಚಿಂತನೆಗೆ ದೂಡುವ ಅಂಶಗಳೂ ಇದರಲ್ಲಿ ಅಡಕವಾಗಿವೆ.

ಮೊದಲಿಗೆ ಈ ತಿದ್ದುಪಡಿ ಕಾಯ್ದೆಯ ಒಳ್ಳೆಯ ಅಂಶಗಳನ್ನು ಪರಿಶೀಲಿಸೋಣ. ಚಿತ್ರೋದ್ಯಮದಲ್ಲಿ ಕೆಲಸ ಮಾಡುವ ಸೃಜನಶೀಲ ಕಲಾವಿದರೆಲ್ಲ ಹಣದ ಥೈಲಿ ಹಿಡಿದುಕೊಂಡಿರುವ ಚಿತ್ರ ನಿರ್ಮಾಪಕರ ಮರ್ಜಿಯಲ್ಲೇ ಇರಬೇಕಾಗುತ್ತದೆ ಎಂಬುದು ಐತಿಹಾಸಿಕ ಸತ್ಯ. ಈ ಕಲಾವಿದರೊಂದಿಗಿನ ಮಾಡಿಕೊಳ್ಳುವ ಒಪ್ಪಂದದ ನಿಬಂಧನೆಗಳು ಸಹ ನಿರ್ಮಾಪಕರ ಮೂಗಿನ ನೇರಕ್ಕೆ ಇರುತ್ತವೆ ಎಂಬುದು ಮತ್ತೊಂದು ಕಟು ಸತ್ಯ.

ಕಾಪಿರೈಟ್ ಕಾಯ್ದೆ ಪ್ರಕಾರ ಯಾವುದೇ ಕೃತಿ, ಅದು ಸಂಗೀತ ಸಂಯೋಜನೆ, ಗೀತೆ, ಬರಹ ಯಾವುದೇ ಆಗಿದ್ದರೂ ಅದನ್ನು ಸೃಷ್ಟಿಸಿದ ವ್ಯಕ್ತಿ ಅದರ ಮಾಲೀಕನಾಗಿರುತ್ತಾನೆ. ಇದೇ ಕಾಯ್ದೆ ಅಡಿ ಕೃತಿಯನ್ನು ಸೃಷ್ಟಿಸಿದ ಕಲಾವಿದ ಅಥವಾ ಬರಹಗಾರ ತನ್ನ ಹಕ್ಕುಗಳನ್ನು ಮೂರನೆಯ ವ್ಯಕ್ತಿಗೆ ವರ್ಗಾವಣೆ ಮಾಡುವ ಅವಕಾಶವನ್ನೂ ಕಲ್ಪಿಸಲಾಗಿದೆ. ಇಂತಹ ವರ್ಗಾವಣೆ ಒಪ್ಪಂದ ಸಂಪೂರ್ಣವಾಗಿ ನಿರ್ಮಾಪಕರ ಪರವಾಗಿ ಇರುತ್ತದೆ.

ಎಲ್ಲ ಮಾಧ್ಯಮಗಳಿಗೂ ಸಂಬಂಧಿಸಿದಂತೆ ಆ ಕೃತಿಯ ಎಲ್ಲ ಹಕ್ಕುಗಳನ್ನು (ವರ್ತಮಾನ ಮತ್ತು ಭವಿಷ್ಯದ) ನಿರ್ಮಾಪಕರಿಗೆ ವರ್ಗಾವಣೆ ಮಾಡಲಾಗುತ್ತದೆ. ಯಾವುದೇ ಕೃತಿಯನ್ನು ಸೃಷ್ಟಿ ಮಾಡಿದವರು ಆ ಕೃತಿಯ ಮೇಲೆ ಎಲ್ಲ ಹಕ್ಕುಗಳನ್ನೂ ಕಳೆದುಕೊಂಡಿರುತ್ತಾರೆ.

ತಂತ್ರಜ್ಞಾನ ಬೆಳೆದಂತೆಲ್ಲ ಸಿನಿಮಾ ಹಾಗೂ ಸಂಗೀತದ ಮಾರುಕಟ್ಟೆ ವಿಸ್ತರಿಸುತ್ತಲೇ ಹೋಗುತ್ತದೆ (ವಿಡಿಯೋ, ಡಿವಿಡಿ, ಸ್ಯಾಟ್‌ಲೈಟ್, ಎಂಪಿ ತ್ರಿ, ಮೊಬೈಲ್ ರಿಂಗ್ ಟೋನ್ ಇತ್ಯಾದಿ). ಈ ಕೃತಿಯ ಮಾಲಿಕರ (ನಿರ್ಮಾಪಕರು) ಬೊಕ್ಕಸ ತುಂಬುತ್ತಲೇ ಹೋಗುತ್ತದೆ. ಆದರೆ, ಅವರು ಈ ಆದಾಯವನ್ನು ಕೃತಿಯ ಸೃಜನಶೀಲ ಸೃಷ್ಟಿಕರ್ತರ ಹಂಚಿಕೊಳ್ಳಬೇಕೆಂಬ ನಿಯಮ ಮಾತ್ರ ಇಲ್ಲ.
 
ಈ ತಿದ್ದುಪಡಿ, ಎರಡು ಮಹತ್ವದ ಬದಲಾವಣೆಗಳ ಮೂಲಕ ಕಾಯ್ದೆಯಲ್ಲಿರುವ ಲೋಪದೋಷ ನಿವಾರಿಸುವಂತಿದೆ. ಯಾವುದೇ ಕೃತಿಯ ಮೇಲಿನ ಹಕ್ಕುಗಳ ವರ್ಗಾವಣೆ ಆ ಸಮಯದಲ್ಲಿ ಅಸ್ತಿತ್ವದಲ್ಲಿದ್ದ ಮಾಧ್ಯಮಕ್ಕೆ ಮಾತ್ರ ಸೀಮಿತವಾಗಿರಬೇಕು ಎಂಬುದು ಮೊದಲನೆಯ ಬದಲಾವಣೆ.

ಸಿನಿಮಾ ಹಾಡುಗಳ ಗೀತ ರಚನೆಕಾರರು ಹಾಗೂ ಸಂಗೀತಗಾರರಿಗೆ ಈ ಹಾಡನ್ನು ಬೇರೆ ರೂಪದಲ್ಲಿ ಬಳಸಿಕೊಂಡಾಗ, ಅಂದರೆ ಚಿತ್ರಮಂದಿರದ ಪ್ರದರ್ಶನ ಬಿಟ್ಟು ಇತರ ರೂಪದಲ್ಲಿ ಬಳಸಿಕೊಂಡಾಗ ಕಡ್ಡಾಯವಾಗಿ ಗೌರವಧನ ನೀಡಬೇಕು (ಅವರ ಹಕ್ಕುಗಳನ್ನು ಕಾನೂನುಬದ್ಧ ವಾರಸುದಾರರು ಅಥವಾ ಕೃತಿ ರಚನೆಕಾರರಿಗೆ ಸಂಬಂಧಿಸಿದ ಸಂಸ್ಥೆಗೆ ಮಾತ್ರ ವರ್ಗಾಯಿಸಬಹುದು) ಎಂಬುದು ಎರಡನೆಯ ಬದಲಾವಣೆ. ಕೃತಿಯನ್ನು ರಚಿಸಿದವರಿಗೆ, ಸಂಗೀತ ಸಂಯೋಜಕರಿಗೆ ಎರಡನೇ ಹಂತದ ಮಾರುಕಟ್ಟೆಯ ಲಾಭ ಪಡೆದುಕೊಳ್ಳಲು ಹಾಗೂ ವ್ಯವಹಾರದಲ್ಲಿ ಮತ್ತಷ್ಟು ಚೌಕಾಸಿ ಮಾಡಲು ನೆರವಾಗುವ ಕ್ರಾಂತಿಕಾರಿ ತಿದ್ದುಪಡಿ ಇದಾಗಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ಆದರೆ, ಚಿತ್ರ ನಿರ್ಮಾಪಕರು ಸಿಟ್ಟಿನಿಂದ ತಮ್ಮ ವಾದ ಮಂಡಿಸುತ್ತಿದ್ದಾರೆ. ಚಿತ್ರದ ಮೇಲೆ ಹಣ ಹೂಡಿಕೆ ಮಾಡುವುದರಿಂದ, ಅದರಲ್ಲಿರುವ ರಿಸ್ಕ್ ಪರಿಗಣಿಸಿ ಚಿತ್ರದಿಂದ ಬರುವ ಎಲ್ಲ ಲಾಭಗಳನ್ನು ತಮಗೇ ನೀಡಬೇಕು ಎಂಬುದು ಅವರ ಅಭಿಪ್ರಾಯ. ಈ ತಿದ್ದುಪಡಿ ಸ್ವಾಗತಾರ್ಹವಾದರೂ ಅದರಲ್ಲಿನ ಗೊಂದಲಗಳು ನಿವಾರಣೆಯಾದಂತಿಲ್ಲ.

ಈ ಕಾಯ್ದೆ ಹೇಗೆ ಅನುಷ್ಠಾನಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಇದು ಗುತ್ತಿಗೆ ಒಪ್ಪಂದದ ಸ್ವಾತಂತ್ರ್ಯ ಹಾಗೂ ವಾಣಿಜ್ಯ ವ್ಯವಹಾರದ ಸ್ವಾತಂತ್ರ್ಯ ಉಲ್ಲಂಘಿಸುತ್ತದೆ ಎಂಬ ಕಾರಣಕ್ಕೆ ಕಾಯ್ದೆಯನ್ನು ಕೋರ್ಟ್‌ನಲ್ಲಿ ಪ್ರಶ್ನಿಸುವ ಸಾಧ್ಯತೆಯೂ ಇದೆ. ಈ ತಿದ್ದುಪಡಿಯನ್ನೇ ರದ್ದುಪಡಿಸುವ ಯತ್ನಗಳು ನಡೆದರೂ ಆಶ್ಚರ್ಯವಿಲ್ಲ.

ತಿದ್ದುಪಡಿಯಲ್ಲಿ ಸೇರ್ಪಡೆ ಮಾಡಿರುವ ಬಹುಜನರಿಗೆ ಉಪಯುಕ್ತವಾಗಬಲ್ಲ ಮತ್ತೊಂದು ಮಹತ್ವದ ಅಂಶವೆಂದರೆ  ಸಿನಿಮಾ ಹಾಗೂ ಸೌಂಡ್ ರೆಕಾರ್ಡಿಂಗ್ ಸೇರಿದಂತೆ ಎಲ್ಲ ಬಗೆಯ ಸೃಜನಶೀಲ ಕೆಲಸಗಳನ್ನು `ಫೇರ್ ಯೂಸ್` ನಿಯಮಾವಳಿ ಅಡಿ ತಂದಿರುವುದು. (ಕಾಪಿರೈಟ್ ಕಾಯ್ದೆ ಅಡಿ ಯಾವುದೇ ಸೃಜನಶೀಲ ಕೃತಿ ವಿಮರ್ಶೆ ಮಾಡುವಾಗ ಆ ಮೂಲ ಸಾಹಿತ್ಯದ ಭಾಗ ಉದ್ಧರಿಸಲು ಅನುಮತಿ ನೀಡಲಾಗಿದ್ದು, ಅದಕ್ಕೆ `ಫೇರ್ ಯೂಸ್` ಎನ್ನುತ್ತಾರೆ. ಇದರಿಂದ ಕಾಪಿರೈಟ್ ಉಲ್ಲಂಘನೆಯಾಗುವುದಿಲ್ಲ.)

ಇಂದಿನ ಯುಟ್ಯೂಬ್ ಯುಗದಲ್ಲಿ ಯಾವುದೇ ಹವ್ಯಾಸಿ ಕಲಾವಿದರು ಮನೆಯಲ್ಲೇ ಕುಳಿತು ರಿಮಿಕ್ಸ್ ಮಾಡಿದ ತಮ್ಮ ಕ್ಲಿಪಿಂಗ್‌ಗಳನ್ನು ಅಪ್‌ಲೋಡ್ ಮಾಡಬಹುದಾಗಿದೆ. ಹವ್ಯಾಸಿ ಅಥವಾ ಸಾಕ್ಷ್ಯಚಿತ್ರ ತಯಾರಕರು ಮತ್ಯಾವುದೋ ಚಿತ್ರದ ಸಂಗೀತ ಅಥವಾ ವಿಡಿಯೋ ಚಿತ್ರದ ಕೆಲ ಭಾಗಗಳನ್ನು ತಮ್ಮ ಚಿತ್ರದಲ್ಲಿ ಅಳವಡಿಸಿಕೊಂಡಾಗ ಕಾಪಿರೈಟ್ ಉಲ್ಲಂಘಿಸಿದ್ದಕ್ಕಾಗಿ ಕಾನೂನು ಕ್ರಮ ಎದುರಿಸುವ ಭೀತಿ ಇದ್ದೇ ಇರುತ್ತದೆ.
 
ಈಗ ತಂದಿರುವ ತಿದ್ದುಪಡಿ ಯಿಂದ ಈ ಭಯ ನಿವಾರಣೆಯಾಗಿದೆ. ಸಂಶೋಧನೆ, ವಿಮರ್ಶೆ ಸೇರಿದಂತೆ ಖಾಸಗಿ ಹಾಗೂ ವೈಯಕ್ತಿಕ ಬಳಕೆಗಾಗಿ ಯಾವುದೇ ವ್ಯಕ್ತಿ ಚಿತ್ರದ ಅಥವಾ ಸಂಗೀತದ ಕ್ಲಿಪಿಂಗ್ ಬಳಸಿಕೊಳ್ಳಬಹುದು ಎಂದು ತಿದ್ದುಪಡಿಯಲ್ಲಿ ಹೇಳಲಾಗಿದೆ.

ಈ ತಿದ್ದುಪಡಿಯಲ್ಲಿ ಶಿಕ್ಷಣ ಸಂಸ್ಥೆಗಳು ಹಾಗೂ ಲಾಭ ರಹಿತವಾಗಿ ಗ್ರಂಥಾಲಯ ನಡೆಸುತ್ತಿರುವವವರಿಗೆ ಅನುಕೂಲಕರವಾಗುವ ಒಂದು ಅಂಶವಿದೆ. ಈ ಸಂಸ್ಥೆಗಳು ಕಾನೂನುಬದ್ಧವಾಗಿ ಖರೀದಿಸಿದ ಸಾಫ್ಟ್‌ವೇರ್ ಪ್ರೋಗ್ರಾಂ, ಸಂಗೀತ ಅಥವಾ ಸಿನಿಮಾದ ಪ್ರತಿಯನ್ನು ಬಾಡಿಗೆಗೆ ಕೊಡಬಹುದು ಅಥವಾ ಬಾಡಿಗೆಗೆ ಪಡೆಯಬಹುದು. ಇದರಿಂದ ಕಾಪಿರೈಟ್ ಉಲ್ಲಂಘನೆಯಾಗುವುದಿಲ್ಲ ಎಂದು ತಿದ್ದುಪಡಿಯಲ್ಲಿ ಹೇಳಲಾಗಿದೆ.

ಈಗ ತಿದ್ದುಪಡಿಯಲ್ಲಿ ಸ್ವಾಗತಾರ್ಹವಲ್ಲದ ಕೆಲ ವಿಚಾರಗಳ ಬಗ್ಗೆ ಚರ್ಚಿಸೋಣ. ಯಾವುದೇ ಸಂಗೀತ ರೆಕಾರ್ಡಿಂಗ್ ಆದ ಐದು ವರ್ಷದೊಳಗೆ ಅದರ `ಕವರ್ ವರ್ಷನ್` (ಕವರ್ ವರ್ಷನ್ ಅಂದರೆ ಯಾವುದೇ ಗೀತೆಯನ್ನು ಅದೇ ಟ್ಯೂನ್‌ನಲ್ಲಿ ಮೂಲ ಗಾಯಕರ ಬದಲಾಗಿ ಮತ್ತೊಬ್ಬರ ಬಳಿ ಹಾಡಿಸುವುದು) ಸೃಷ್ಟಿಸಬಾರದು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಜನಪ್ರಿಯ ಗೀತೆಗಳ ಕವರ್ ವರ್ಷನ್‌ಗಳ ಆಧರಿಸಿಯೇ ಭಾರತದ ಸಂಗೀತ ಉದ್ಯಮ ಬದುಕಿದೆ, ಬೆಳೆದಿದೆ ಹಾಗೂ ಬೆಳೆಯುತ್ತಿದೆ.
 
ಮತ್ಯಾರದೋ ಸೃಷ್ಟಿಯನ್ನು ಆಧರಿಸಿ ಹಣ ಮಾಡಿಕೊಳ್ಳುವ ಅಕ್ರಮ ಮಾರ್ಗದಂತೆ `ಕವರ್ ವರ್ಷನ್`ಗಳು ಕಾಣಬಹುದು. ಆದರೆ, ಸಂಗೀತ ಉದ್ಯಮದಲ್ಲಿ ಯಾವುದೋ ವ್ಯಕ್ತಿಯ, ಸಂಸ್ಥೆಯ ಏಕಸ್ವಾಮ್ಯವನ್ನು ಇದು ಮುರಿದಿದೆ ಎಂಬುದನ್ನು ನಾವು ಮರೆಯಬಾರದು.

ಈ ತಿದ್ದುಪಡಿಯ ಮೂಲಕ ಭಾರತದಲ್ಲಿ ಡಿಜಿಟಲ್ ಹಕ್ಕುಗಳ ನಿರ್ವಹಣೆಯ (ಡಿಆರ್‌ಎಂ) ನಿಯಮಾವಳಿಯನ್ನೂ ಜಾರಿಗೆ ತರಲಾಗಿದೆ. ವಿಪೊ ಕಾಪಿರೈಟ್ ಒಪ್ಪಂದ ಹಾಗೂ ವಿಪೊ ಪ್ರದರ್ಶನ ಹಾಗೂ ಧ್ವನಿ ಒಪ್ಪಂದದ (ಕಾಪಿರೈಟ್‌ಗೆ ಸಂಬಂಧಿಸಿದಂತೆ 1996ರಲ್ಲಿ ರೂಪಿಸಿರುವ ಜಾಗತಿಕ ಒಪ್ಪಂದ) ಧಾಟಿಯಲ್ಲಿ ಈ ಕಾಯ್ದೆ ರೂಪಿಸಲಾಗಿದೆ.
 
ಡಿಆರ್‌ಎಂ ಅಂದರೆ ಡಿಜಿಟಲ್ ರೂಪದಲ್ಲಿ ಇರುವ ವಿಚಾರಗಳನ್ನು ಯಾರೂ ಕಳವು, ನಕಲು ಮಾಡದಂತೆ ತಂತ್ರಜ್ಞಾನದ ಮೂಲಕ ಕೀಲಿ ಹಾಕುವುದು. ಈ ತಾಂತ್ರಿಕ ಕೀಲಿಯನ್ನು ಮುರಿದು ಡಿಜಿಟಲ್ ಮಾಹಿತಿಗಳನ್ನು ಪಡೆದಲ್ಲಿ ಅದು ಈಗ ಅಪರಾಧ. ಆದರೆ, ಡಬ್ಲುಸಿಟಿ ಅಥವಾ ಡಬ್ಲುಪಿಪಿಟಿಗೆ ಭಾರತ ಇನ್ನೂ ಸಹಿ ಹಾಕಿಲ್ಲವಾದ್ದರಿಂದ `ಡಿಆರ್‌ಎಂ` ಅನ್ನು ಭಾರತದಲ್ಲಿ ಜಾರಿಗೆ ತರುವ ಅಗತ್ಯ ಇತ್ತೆ ಎಂಬ ಪ್ರಶ್ನೆಯೂ ಇಲ್ಲಿ ಏಳುತ್ತದೆ.

ಇಷ್ಟೆಲ್ಲ ಹೇಳಿದ ಮೇಲೂ ಈ ತಿದ್ದುಪಡಿಯಲ್ಲಿ ಪ್ರಶಂಸಿಸಬಹುದಾದ ಮತ್ತೊಂದು ಅಂಶವಿದೆ. `ಡಿಆರ್‌ಎಂ` ಮೇಲೆ ಜಾರಿಗೆ ತರಲಾದ ಕಾನೂನು ಈ ನಿಟ್ಟಿನಲ್ಲಿ ಜಗತ್ತಿನ ಯಾವುದೇ ದೇಶದಲ್ಲಿ ರೂಪಿಸಲಾದ ಕಾಯ್ದೆಗಿಂತ ಅತ್ಯುತ್ತಮವಾಗಿದೆ. ಭವಿಷ್ಯದಲ್ಲಿ ಭಾರತ ಜಾಗತಿಕ ಒಪ್ಪಂದಗಳಾದ `ವಿಪೊ` ಮತ್ತು `ಡಬ್ಲುಪಿಪಿಟಿ`ಗೆ ಸಹಿ ಹಾಕುವ ಸಂದರ್ಭ ಬಂದೇ ಬರುತ್ತದೆ.

ಆಗ ಹೆಚ್ಚು ಚೌಕಾಸಿ ಮಾಡಲು ಸಾಧ್ಯವಾಗುವುದಿಲ್ಲ. ಒತ್ತಡ ಬರುವ ಮುನ್ನವೇ ನಮ್ಮ ದೇಶಕ್ಕೆ ಸೂಕ್ತವಾಗಬಲ್ಲ  `ಡಿಆರ್‌ಎಂ` ಕಾನೂನು ರೂಪಿಸುವ ದೂರದೃಷ್ಟಿ ಹಾಗೂ ಜಾಣ್ಮೆಯನ್ನು ನಮ್ಮ ನೀತಿ ನಿರೂಪಕರು ಈಗ ತೋರಿದ್ದಾರೆ.

ಸೃಜನಶೀಲ ಕೃತಿಯ ಸೃಷ್ಟಿಕರ್ತರಿಗೆ ಸಾಕಷ್ಟು ಲಾಭ ಮಾಡಿಕೊಡುವ ಉದ್ದೇಶ ಹಾಗೂ ಜ್ಞಾನದ ಮುಕ್ತ ಬಳಕೆಯ ಅವಕಾಶ ಇವೆರಡರ ನಡುವೆ ಸಮತೋಲನ ಸಾಧಿಸುವಂತೆ ಕಾಪಿರೈಟ್ ಕಾಯ್ದೆ ಇರಬೇಕು. ಮಾಧ್ಯಮಗಳ ಏಕಸ್ವಾಮ್ಯ ಹಾಗೂ ಹಾಲಿವುಡ್ ಉದ್ಯಮದ ಅಗಾಧ ಬೆಳವಣಿಗೆಯಿಂದ ಕಾಲಾಂತರದಲ್ಲಿ ಈ ಸಮತೋಲನ ಹಕ್ಕುಸ್ವಾಮ್ಯ ಪಡೆದ ಮಾಲೀಕರತ್ತ ವಾಲಿತ್ತು.
 
ಕೃತಿಯ ಸೃಷ್ಟಿಕರ್ತರು ಹಾಗೂ ಸಾರ್ವಜನಿಕರು ಲೆಕ್ಕಕ್ಕೇ ಇರಲಿಲ್ಲ. ಇಂತಹ ಅಸಮತೋಲನ ನಿವಾರಿಸುವ ನಿಟ್ಟಿನಲ್ಲಿ ಸರ್ವರಿಗೂ ಒಳಿತಾಗುವಂತೆ ಸರ್ಕಾರ ಕಾಪಿರೈಟ್ ಕಾಯ್ದೆಗೆ ತಿದ್ದುಪಡಿ ತಂದಿದೆ. ಮುಂದಿನ ದಿನಗಳಲ್ಲಿ ನಿರ್ದಿಷ್ಟ ತಿದ್ದುಪಡಿಯ ಕುರಿತು ವಿಶದವಾಗಿ ಚರ್ಚಿಸಬಹುದು. ಆದರೆ, ಸದ್ಯಕ್ಕೆ ಸಂಸತ್ತಿನಂತೆ ಒಕ್ಕೊರಲಿನಿಂದ ತಿದ್ದುಪಡಿ ಕಾಯ್ದೆಯನ್ನು ಸ್ವಾಗತಿಸೋಣ.

ಆಲ್ಟರ್‌ನೇಟಿವ್ ಲಾ ಫೋರಂನ ಸ್ಥಾಪಕರಲ್ಲಿ ಒಬ್ಬರಾದ ಲೇಖಕರು ಕಾಪಿರೈಟ್ ಕಾಯ್ದೆಯ ವಿಷಯದಲ್ಲಿ ತಜ್ಞರು.


Read the English translation below:

The pros and cons of the Copyright Amendment Act 2012

In his passionate speech in debate on the Rajya Sabha the noted lyricist and writer Javed Akhtar highlighted the plight of a number of musicians, lyricists and film writers who despite having contributed to some of the most important films in Indian history remained in poverty since they did not receive any benefits by way of royalties for their work. Examples of artists who suffered in penury unable to even afford medicines range from Shailendra who gave us the lyrics for films like Awara and Shree 420 to writer Satish Bhatnagar who wrote ‘Seeta aur Geeta’ and ‘Satte pe Satta’. Akhtar argued that the copyright amendment was a necessary corrective to a system that had worked incredibly well for film producers at the cost of artists. It was not surprising then that the Copyright Amendment Act 2012 saw a surprising consensus from all the political parties in the Lok Sabha and the Rajya Sabha and has been hailed as an amendment that restores rights to writers and musicians.

There is no doubt that the Copyright Amendment 2011 is one of the most significant developments in copyright law and while the media attention has been on the victory of artists against film producers it is important to remember that the amendment itself covers a much wider gamut of issues which runs the risk of being lost in the euphoria of this victory. While there are many welcome changes that have been brought about by the Amendment, there are also many others which should give cause of concern for anyone interested in public interest issues of wider access to knowledge, culture and technology. Lets start with the good news first.

It is well known that artists working in the film industry have historically been at a significant disadvantage when it comes to negotiating with the film producers who control the money and consequently dictate the terms of contracts with people who contribute to the film. Even though copyright law says that the owner of copyright is the creator of the work there has always existed an exception which allows the creator to assign their rights to a third party. The assignment agreements are heavily tilted in favour of the producers and all rights in all mediums (present and future) are handed over to the producer. It is a common experience that the creators of copyright are rarely ever the owners of copyright. As the secondary market for films and music developed with each generation of technology (videos, DVD, Satelite, MP3s, mobile ring tones) the owners of content found a situation in which we saw an evergreening of their property guaranteeing an eternal source of revenue which they were not obliged to share with any of the contributors. The amendment seeks to correct this by bringing in two significant changes. Firstly it says that an assignment of rights shall only be for a medium of exploitation which was in existence at the time of the assignment. It also says that authors of a literary or musical work used in a film song lyrics shall have a right to receive royalties from the work if the work is used in any manner other than as a part of a film shown in a cinema hall (the right may be assigned only to legal heirs or to a collecting society).

There can be no arguing that this is a radical amendment that significantly alters the ability of creators to participate in the benefits of secondary markets and also increase their bargaining power. Film producers on the other hand are livid arguing that as the primary investors and risk takers in a film they should be entitled to all the benefits accruing from the film. While the amendment is very welcome it is not bereft of ambiguities and possible complications, and we have to wait and see how the law will now be enforced. It is also likely that there will be constitutional challenges on the grounds that this is in violation of freedom of contract and the right to trade, and possibly even attempts to subvert the law. But for the moment lets celebrate a very significant victory for creators.

Even as creators celebrate, we should also toast the amendment for its sensitive response to the demands made by the visually disabled community. Technology has bridged the incredible gap that existed for disabled people desiring to access books and other materials. Braille was a horribly expensive and archaic technology but screen reading software has made it possible for visually disabled people to convert books into digital formats which can be read through mobile phones, computers and digital tablets. But it was impossible to convert books without violating the rights of copyright owners since the right to make electronic versions of the book is their exclusive right. The Amendment now carves out an exception for people with disabilities to be able – as a matter of right- to create digital versions and Sections 51(1)(zb) and 31B now allow the creation of ‘any accessible format’ without needing to pay royalty.

Another very significant amendment is the extension of the fair use provision to all classes of works including films and sound recordings. In this era of youtube when people routinely create their own remixes, upload clips this is a very welcome amendment. Any amateur or documentary film maker will testify to the difficulty hat the face when they need to use music or video clips as a part of their films and they do so with the constant threat of being sued for copyright infringement. The amendment allows a person to use film and music clips for private or personal use including research, as well as for criticism or review of that work. It is to be noted that the word criticism has been interpreted by the courts to include the ability to create parodies of the original work. Other people who should welcome the act includes educational institutions and non profit libraries who are now allowed to rent or lend a lawfully acquired copy of a software program, music and films.

And now for some of the not so good news. The amendment makes it more difficult to create cover versions of songs and cover versions can now not be made for a period of five year form the time of the recording of the song. As is well known the Indian music industry has grown on the basis of the freedom to make cover versions. While cover versions may seem like an unfair way of benefiting form someone else’s creation the fact of the matter is that version recording has been one of the most significant ways in which the music industry was demonopolized. The Amendment also brings in Digital rights Management (DRM) to keep India in tune with the WIPO Copyright Treaty and the WIPO Performances and Phonograms Treaty. DRM are essentially digital or technology locks that are used to protect content and the law now makes it an offence to circumvent any technology lock. It is questionable whether this is a desirable introduction. India is not yet a signatory to the WCT or the WPPT and hence there is no need to bring DRM into Indian law. Having said that one must also appreciate that the Indian law on DRM is perhaps one of the best in the world, and one can speculate that the law makers decided to bring in a home grown version more suited to Indian reality knowing that at some point if time there would be global pressure on Indian to sign onto the two treaties and then there would be less bargaining power in terms of the law that would have been introduced.

Copyright was always supposed to be balance between providing incentives to creators and ensuring that there was adequate public access to knowledge. Over the years the rise of media monopolies and the might of Hollywood effectively ensured that this balance tilted heavily in favour of rights owners against the interests of creators and the general public. The Copyright amendment demonstrates that when such imbalances threaten creativity and free speech it is incumbent on the government to respond with necessary and adequate measures that serve the greater good. There will be time  in the coming future to discuss and debate the specific amendments in detail, but for now lets join the parliament in unanimously welcoming a much over due amendment to the law.