ವಿಕಿಪಿಡಿಯಾಗೆ ಕನ್ನಡ ವಿಶ್ವಕೋಶ
The article was published in Kannada Prabha on July 15, 2014.
ಮೊದಲ ಹಂತದಲ್ಲಿ ಮೂರು ದಶಕಗಳಷ್ಟು ಹಳೆಯ ಕನ್ನಡ ವಿಶ್ವಕೋಶದ ಆರು ಸಂಪುಟಗಳನ್ನು ಕ್ರಿಯೇಟಿವ್ ಕಾಮನ್ಸ್ ಪರವಾನಗಿಯಡಿ ಗಣಕೀರಣಗೊಳಿಸಿ ವಿಕಿಪಿಡಿಯಾಗೆ ಬಿಡುಗಡೆಗೊಳಿಸಲಾಗಿದೆ. ವಿಶ್ವಕೋಶ ಪರಿವರ್ತನೆ ಯೋಜನೆಯಾದ ಡಿಡಿಠಣಣಛ್ಝಿಡಿ.ಟಣಣಟಣಡ್ಟ್ಠಜ್ಡಟ್ಝಿಢಿಠ ಅನ್ನು ಮಂಗಳವಾರ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಭವನದಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಲೋಕಾರ್ಪಣೆ ಮಾಡಿದರು. ನಂತರ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ವೇಗೆ ಹೆಚ್ಚಾಗಿದೆ. ಮೈಸೂರು ವಿವಿಯಲ್ಲಿ ಉತ್ಕೃಷ್ಟವಾದ ಪ್ರೌಢ ಪ್ರಬಂಧಗಳಿದ್ದು ಅವುಗಳೆಲ್ಲ ಜನರಿಗೆ ತಲುಪಬೇಕೆಂಬ ನಮ್ಮ ಅಭಿಲಾಷೆಗೆ ಪೂರಕವಾಗಿ ಈ ಯೋಜನೆ ಈಡೇರಿದೆ. ನಮ್ಮ ವಿವಿಯಲ್ಲಿ ವಿಶ್ವಕೋಶದ 14 ಸಂಪುಟಗಳಿದ್ದು, ಈಗ 6 ಸಂಪುಟಗಳು ವಿಕಿಪಿಡಿಯಾಗೆ ಮಾರ್ಪಟ್ಟಾಗಿವೆ. ಇನ್ನುಳಿದ ಸಂಪುಟಗಳನ್ನು ಮಾರ್ಪಾಟುಗೊಳಿಸಲಾಗುವುದು. ವಿಷಯ ವಿಶ್ವಕೋಶದ 30 ಸಂಪುಟಗಳಿದ್ದು 5 ಸಂಪುಟಗಳನ್ನು ಮಾರ್ಪಟಿಸಲಾಗಿದೆ. ಬೆರಳ ತುದಿಯಲ್ಲಿ ಬೇಕಾದ ಮಾಹಿತಿ ಲಭ್ಯವಾಗಬೇಕೆಂಬುದು ವಿವಿಯ ಉದ್ದೇಶವಾಗಿದೆ ಎಂದರು.
ವಿಶ್ವಕೋಶ ಪರಿವರ್ತನಾ ಯೋಜನೆಯ ರೂವಾರಿ ಯು.ಬಿ. ಪವನಜ ಮಾತನಾಡಿ, ಕನ್ನಡ ಭಾಷೆ ಉಳಿಯಬೇಕೆಂದರೆ ಹೆಚ್ಚು ಹೆಚ್ಚು ಬಳಸಬೇಕು. ಭಾಷೆಯನ್ನು ತಂತ್ರಜ್ಞಾನಕ್ಕೆ ಅಳವಡಿಸಿದರೆ ನಮ್ಮ ಮುಂದಿನ ಪೀಳಿಗೆ ಬಳಸಿ, ಬೆಳೆಸಿಕೊಂಡು ಹೋಗುತ್ತಾರೆ. ಮಕ್ಕಳಿಗೆ ಓದೋಕೆ ಪಠ್ಯಪುಸ್ತಕಗಳಿವೆ. ಆದರೆ, ಬೇಕಾದ ಮಾಹಿತಿಯನ್ನು ನೀಡಬೇಕೆಂದರೆ ಪುಸ್ತಕದಲ್ಲಿರುವ ವಿಶ್ವಕೋಶವನ್ನು ನೆಚ್ಚಿಕೊಳ್ಳಬೇಕಾಗಿತ್ತು. ಈಗ ವಿಕಿಪಿಡಿಯಾಗೆ ಮಾರ್ಪಡಿಸಿರುವುದರಿಂದ ಜನರಿಗೆ ಹೆಚ್ಚು ಅನುಕೂಲವಾಗಿದೆ ಎಂದರು.
ಮಾಹಿತಿ ತುಂಬಬಹುದು: ಮಾಹಿತಿ ಕಣಜ ಎನಿಸಿರುವ ವಿಕಿಪಿಡಿಯಾದಲ್ಲಿ ಇದುವರೆಗೆ ಪ್ರಪಂಚದ 287 ಭಾಷೆಗಳು ಅಳವಡಿಕೆಯಾಗಿದ್ದು, ಭಾರತದ 20 ಭಾಷೆಗಳಿವೆ. ಮುಕ್ತವಾಗಿ, ಸ್ವತಂತ್ರ ವಿವಿ ಎಂದೆ ಕರೆಯುವ ವಿಕಿಪಿಡಿಯಾದಲ್ಲಿ ಯಾರು ಬೇಕಾದರು ಮಾಹಿತಿ ತುಂಬಬಹುದು. ಆದರೆ, ಕಾಪಿರೈಟ್ ಆಕ್ಟ್‌ನಡಿ ಬರುವ ಲೇಖನಗಳನ್ನು ಬಳಸುವಂತಿಲ್ಲ. ಅದಕ್ಕಾಗಿಯೇ ಕ್ರಿಯೇಟಿವ್ ಕಾಮನ್ಸ್ ಪರಾವನಗಿ ಲಭ್ಯವಿದ್ದು, ಇದರ ಸಹಾಯದಿಂದ ಮಾಹಿತಿ ಒದಗಿಸಬಹುದು ಎಂದರು.
ಸ್ಮರಣಿಕೆ ನೀಡಿ ಗೌರವ: ಇದೇ ವೇಳೆ ಮೈಸೂರು ವಿವಿಯ ವಿಶ್ವಕೋಶವನ್ನು ವಿಕಿಪಿಡಿಯಾಗೆ ಅಳವಡಿಸಲು ಶ್ರಮಿಸಿದ ಬೆಂಗಳೂರಿನ ಕ್ರೈಸ್ತ ವಿವಿಯ ವಿದ್ಯಾರ್ಥಿಗಳಾದ ಕೋಮಲ್, ಗೀತಾ, ಗೌತಮ್, ಪ್ರತಾಪ್, ಭರತ್, ಸ್ಮಿತಾ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಆರ್. ರಾಮಕೃಷ್ಣ ಅವರು ಮೈಸೂರು ವಿವಿಯ ವಿಶ್ವಕೋಶದ ಬಗ್ಗೆ ತಿಳಿಸಿದರು. ಮೈವಿವಿ ಯೋಜನೆ, ಉಸ್ತುವಾರಿ ಮತ್ತು ಮೌಲ್ಯಮಾಪನ ಮಂಡಳಿಯ ನಿರ್ದೇಶಕ ಪ್ರೊ.ಎಸ್. ರವಿ, ಕ್ರಿಯೇಟಿವಿ ಕಾಮನ್ಸ್‌ನ ತೇಜಸ್ ಜೈನ್ ಇದ್ದರು.
ಕ್ರಿಯೇಟಿವ್ ಕಾಮನ್ಸ್ ಲೈಸನ್ಸ್ ಬಳಸಿ
ಮೈಸೂರು ಸಾಕಷ್ಟು ಪುಸ್ತಕಗಳಲ್ಲಿ ನಮಗೆ ಬೇಕಾದ ಮಾಹಿತಿ ಇದ್ದರು ಸಹ ಹಂಚಲು ಮುಂದಾದಾಗ ಕಾಡುವ ಕಾಪಿರೈಟ್ ಆಕ್ಟ್ ಭೂತದಂತೆ ಕಾಡುತ್ತದೆ. ಅದರಿಂದ ಹೊರ ಬರಲು ಇರುವ ಪರ್ಯಾಯ ಉಪಾಯವೇ ಕ್ರಿಯೇಟಿವ್ ಕಾಮನ್ಸ್ ಲೈಸನ್ಸ್. ಇದನ್ನು ಪ್ರತಿಯೊಬ್ಬರೂ ಬಳಸಬಹುದಾಗಿದೆ ಎಂದು ಸಂಸ್ಥೆಯ ತೇಜಸ್ ಜೈನ್ ಅಭಿಪ್ರಾಯಪಟ್ಟರು. ಜ್ಞಾನ ಯಾರ ಸ್ವತ್ತೂ ಅಲ್ಲ. ಅದೊಂದು ಮುಕ್ತ ಹಾಗೂ ಸುಲಭದಲ್ಲಿ ಎಲ್ಲರಿಗೂ ಸಿಗುವಂತಾಗಬೇಕು. ಇದಕ್ಕೆ ವೇದಿಕೆಯೊದಗಿಸಿಕೊಡುವ ಅಂತರ್ಜಾಲಕ್ಕೆ ಪರವಾನಗಿ ಎಂಬ ಕೊಂಕು ಕಾಡುತ್ತಿದೆ. ಇದರ ವಿರುದ್ಧ ಎಬೆನ್ ಮೊಗ್ಲೆನ್ ಎಂಬವರು ಚಳವಳಿ ನಡೆಸಿ ಕ್ರಿಯೇಟಿವ್ ಕಾಮನ್ಸ್ ಲೈಸನ್ಸ್ ಎಂಬ ಹೊಸ ಪರಿಕಲ್ಪನೆಯನ್ನು ಹುಟ್ಟುಹಾಕಿದರು. ಇದರಡಿ ಯಾರ ಬೇಕಾದರು ಮಾಹಿತಿ ಬಳಸಬಹುದು ಎಂದರು.
ಏನಿದು ವಿಶ್ವಕೋಶ?
ಜ್ಞಾನದ ವಿವಿಧ ಶಾಖೆಗಳ ವಿವೇಚನೆಯುಳ್ಳ, ಸಾಮಾನ್ಯವಾಗಿ ಬಿಡಿ ಲೇಖನಗಳನ್ನು ಅಕರಾದಿಯಾಗಿ ಒಳಗೊಂಡ ಭಂಡಾರವೇ ವಿಶ್ವಕೋಶ. ಎನ್‌ಸೈಕ್ಲೋಪಿಡಿಯಾ ಬ್ರಿಟಾನಿಕ ಮಾದರಿಯಲ್ಲಿ ಮೈಸೂರು ವಿವಿಯಲ್ಲಿ 1954 ರಲ್ಲಿ ವಿಶ್ವಕೋಶ ರಚಿಸುವ ಪ್ರಯತ್ನ ಆರಂಭವಾಯಿತು. 1968 ರವರೆಗ ಈ ಯೋಜನೆಯು ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆಯ ಅಧೀನದಲ್ಲಿತ್ತು. ನಾಡೋಜ ಡಾ. ದೇಜಗೌ ಮೈಸೂರು ವಿವಿಯ ಕುಲಪತಿಯಾಗಿದ್ದಾಗ ಯೋಜನೆಯನ್ನು ವಿವಿಯ ವಶಕ್ಕೆ ವಹಿಸಲಾಯಿತು. ಇದುವರೆಗೆ ಒಟ್ಟು ಕನ್ನಡ ವಿಶ್ವಕೋಶದ 14 ಸಂಪುಟಗಳನ್ನು ಹೊರತರಲಾಗಿದ್ದು, 30 ವಿಷಯ ವಿಶ್ವಕೋಶಗಳಿವೆ.
ಇದನ್ನು ಬಳಸುವವರ ಗಮನಕ್ಕೆ
- ಯಾವುದೇ ಮಾಹಿತಿ ಪಡೆದರು ಸಹ ಅದರ ಕರ್ತೃವಿನ ಹೆಸರನ್ನು ಪ್ರಕಟಿಸುವುದು
- ಕೆಲಸವನ್ನು ಬದಲಾವಣೆ ಮಾಡಿ ಅಥವಾ ಹಾಗೆ ವಿತರಿಸಬಹುದೇ ಎಂಬುದನ್ನು ಗಮನಿಸಬೇಕು
- ಕೆಲವು ಸಂದರ್ಭದಲ್ಲಿ ಮಾಹಿತಿಯನ್ನು ಬದಲಾಯಿಸುವ ಅಥವಾ ಪುನರಾವರ್ತಿಸುವ ಸಂದರ್ಭ ಬಂದಲ್ಲಿ ಕ್ರಿಯೇಟಿವ್ ಕಾಮನ್ಸ್ ಲೈಸನ್ಸ್‌ನಡಿ ಮಾಡಬಹುದು
ಬಳಸುವಾಗ ಎದುರಾಗುವ ಸವಾಲುಗಳು
- ಇಷ್ಟುದಿನ ಪುಸ್ತಕದಲ್ಲಿ ಮಾಹಿತಿ ದಾಖಲಿಸಿ ವ್ಯಾಪಾರ ಮಾಡುತ್ತಿದ್ದವರಿಗೆ ಆತಂಕ ಕಾಡಬಹುದು
- ತಮ್ಮ ಬೌದ್ಧಿಕ ಸ್ವಾಮ್ಯತೆ ಹೋಗುತ್ತೆ ಎಂಬ ಭಯ ಕಾಡಲಿದೆ
- ಅಂತರ್ಜಾಲದಲ್ಲಿ ಬಳಸಬೇಕಾದಾಗ ಗಣಕೀಕರಣಕ್ಕೆ ಒಪ್ಪುವ ಭಾಷೆಯನ್ನು ಬಳಸುವುದು
- ಹೆಚ್ಚು ಅಂತರ್ಜಾಲವನ್ನು ಬಳಸುವುದರಿಂದ ಗ್ರಂಥಾಲಯಗಳ ಅವಶ್ಯಕತೆ ಬೇಕೆ ಎಂಬ ಪ್ರಶ್ನೆ ಕಾಡಲಿದೆ