ಅಂತರ್ಜಾಲದಲ್ಲಿ ನೆಟ್ಟ ಸಸಿಗೆ ಈಗ ಹತ್ತು ವರ್ಷ
Read the original article published in Kannada Prabha on November 1, 2013. For downloading the article (PDF), click here.
ಕನ್ನಡದ ಮುಕ್ತ ಜ್ಞಾನಕೋಶವಾದ ವಿಕಿಪೀಡಿಯ ಈಗ ಜನಪ್ರಿಯ
ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎಂಬಂತೆ ನವೆಂಬರ್ ಕೂಡ ಮರಳಿ ಬರುತಿದೆ (ಬೇಂದ್ರೆಯವರು ಕ್ಷಮಿಸುತ್ತಾರೆ). ಕನ್ನಡದ ಸ್ಥಿತಿಗತಿ ಬಗ್ಗೆ ಮತ್ತೊಮ್ಮೆ ಲೇಖನಗಳ ಮಹಾಪೂರದ ಸಮಯ. ಪ್ರತಿ ನವೆಂಬರ್‌ಗೆ ಇದನ್ನು ಮತ್ತೆ ಮತ್ತೆ ಓದುವುದು ಎಲ್ಲರಿಗೂ ರೂಢಿಯಾಗಿದೆ. ಅಂತೆಯೇ ಮತ್ತೆಮತ್ತೆ ಬರೆಯುವುದು ನಮಗೆ ರೂಢಿಯಾಗಿಬಿಟ್ಟಿದೆ.
ಪೆಟ್ರೋಲ್ ಉಳಿಸಬೇಕಾದರೆ ಪೆಟ್ರೋಲ್ ಬಳಸಬಾರದು. ಕನ್ನಡ ಉಳಿಸಬೇಕಾದರೆ...?' ಎಂಬ ಮಾತು ಪ್ರತಿ ನವೆಂಬರ್ ಒಂದರಂದು ಅತ್ತಿಂದಿತ್ತ ಹರಿದಾಡುವ ಒಂದು ಜೋಕ್. ಕನ್ನಡ ಉಳಿಯಬೇಕಾದರೆ ಕನ್ನಡ ಬಳಸಬೇಕು. ಇದು ಎಲ್ಲರೂ ಒಪ್ಪುವ ಮಾತು. ಕನ್ನಡ ಬಳಸುವುದೆಂದರೆ ನಿತ್ಯದ ವ್ಯವಹಾರಗಳಲ್ಲಿ ಕನ್ನಡ ಬಳಸುವುದು. ಕನ್ನಡ ಭಾಷೆಯ ಶ್ರೀಮಂತಿಗೆ ಬಗ್ಗೆ ಭಾಷಣ ಬಿಗಿದು ಮೇಜು ಕುಟ್ಟುವುದರಿಂದ ಕನ್ನಡ ಉಳಿಯುವುದಿಲ್ಲ. ಅದು ಉಳಿಯಬೇಕಾದರೆ ಜನಸಾಮಾನ್ಯರು ಅದನ್ನು ಬಳಸಬೇಕು. ಜನಸಾಮಾನ್ಯರಿಗೆ ಪ್ರಮುಖವಾಗಿ ಬೇಕಾಗಿರುವುದು ಸಾಹಿತಿಗಳು ಬೆನ್ನು ತಟ್ಟಿಕೊಳ್ಳುವ ಸೃಜನಶೀಲ (ಕಥನ) ಸಾಹಿತ್ಯವಲ್ಲ. ಅದು ಬೇಡ ಎಂದಲ್ಲ. ಆದರೆ ಜನಸಾಮಾನ್ಯರಿಗೆ ಅಗತ್ಯವಾಗಿ ಬೇಕಾದುದು ಮಾಹಿತಿ ಸಾಹಿತ್ಯ. ಒಬ್ಬಾತನಿಗೆ ಹೊಚ್ಚಹೊಸ ನಮೂನೆಯ ಪ್ಲಾಸ್ಮಾ, ಎಲ್‌ಸಿಡಿ ಅಥವಾ ಎಲ್‌ಇಡಿ ಟಿವಿ ಖರೀದಿಸಬೇಕಾಗಿದೆ ಎಂದಿಟ್ಟುಕೊಳ್ಳಿ. ಆತನಿಗೆ ಇವುಗಳ ವ್ಯತ್ಯಾಸ ಗೊತ್ತಿರಬೇಕು. ತನ್ನ ಅಗತ್ಯ ಮತ್ತು ಇತಿಮಿತಿಯೊಳಗೆ ಯಾವುದು ಉತ್ತಮ ಎಂದು ತಿಳಿಯಬೇಕು. ಆತ ಇದನ್ನು ಕನ್ನಡದಲ್ಲಿ ತಿಳಿಯುವ ಬಗೆ ಹೇಗೆ? ಇದಕ್ಕೆ ಬೇಕು ಒಂದು ವಿಶ್ವಕೋಶ.
ಈಗ ಇನ್ನೊಂದು ವಿಷಯದ ಕಡೆ ಗಮನ ಹರಿಸೋಣ. ಈಗ ಇಂಗ್ಲಿಷ್ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಬಗ್ಗೆ ಚರ್ಚೆ ನಡೆಯುತ್ತಿದೆ. ಕನ್ನಡ ಮಾಧ್ಯಮದಲ್ಲಿ ಕಲಿತರೆ ನಮ್ಮ ಮಕ್ಕಳಿಗೆ ಪ್ರಪಂಚ ಜ್ಞಾನ ದೊರೆಯುವುದಿಲ್ಲ. ಆದ್ದರಿಂದ ನಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸುತ್ತೇವೆ ಎಂದು ಹೆಚ್ಚಿನ ತಂದೆತಾಯಂದಿರು ಹೇಳುತ್ತಾರೆ. ಕನ್ನಡ ಭಾಷೆಯಲ್ಲಿ ಪ್ರಪಂಚ ಜ್ಞಾನದ ಲಭ್ಯತೆ ತುಂಬಾ ಕಡಿಮೆ ಎಂಬುದನ್ನು ನಾವು ಒಪ್ಪಲೇಬೇಕು. ಆದರೆ ಈ ಸಮಸ್ಯೆಗೆ ಪರಿಹಾರ ಇಂಗ್ಲಿಷ್ ಭಾಷೆಗೆ ಮೊರೆಹೋಗುವುದಲ್ಲ. ಕನ್ನಡ ಭಾಷೆಯಲ್ಲಿ ಪ್ರಪಂಚ ಜ್ಞಾನವನ್ನು ತರುವುದು. ಈ ರೀತಿ ಮಾಡಲು ಸಹಾಯ ಮಾಡುವುದು ಅತಿ ಜನಪ್ರಿಯವಾಗಿರುವ ಸ್ವತಂತ್ರ ಮತ್ತು ಮುಕ್ತ ವಿಶ್ವಕೋಶ ಕನ್ನಡ ವಿಕಿಪೀಡಿಯ.
ವಿಕಿಪೀಡಿಯ ಒಂದು ಸ್ವತಂತ್ರ ಮತ್ತು ಮುಕ್ತ ವಿಶ್ವಕೋಶ. ಇದು 2001ರಲ್ಲಿ ಪ್ರಾರಂಭವಾಯಿತು. ಇದು ಜಗತ್ತಿನ 286 ಭಾಷೆಗಳಲ್ಲಿದೆ. ಇನ್ನೂ ಸುಮಾರು 300 ಭಾಷೆಯ ವಿಕಿಪೀಡಿಯಗಳು ತಯಾರಿ ಹಂತದಲ್ಲಿವೆ. ಸುಮಾರು 20ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ವಿಕಿಪೀಡಿಯ ಲಭ್ಯ. ಅದರಲ್ಲಿ ಕನ್ನಡವೂ ಸೇರಿದೆ. ಭಾರತೀಯ ಭಾಷೆಯ ವಿಕಿಪೀಡಿಯಗಳಲ್ಲಿ ಹಿಂದಿ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಬೆಂಗಾಳಿ ವಿಕಿಪೀಡಿಯಗಳು ಕನ್ನಡಕ್ಕಿಂತ ಅಂಕಿ ಅಂಶಗಳಲ್ಲಿ ಮುಂದಿವೆ. ಕನ್ನಡ ವಿಕಿಪೀಡಿಯ 2003ರಲ್ಲಿ ಪ್ರಾರಂಭವಾಯಿತು. ಅಂದರೆ ಕನ್ನಡ ವಿಕಿಪೀಡಿಯಕ್ಕೆ ಈಗ ದಶಮಾನೋತ್ಸವ.
ಎಲ್ಲ ವಿಕಿಪೀಡಿಯಗಳಂತೆ ಕನ್ನಡ ವಿಕಿಪೀಡಿಯವೂ ಜನರಿಂದ ಜನರಿಗಾಗಿ ಜನರೇ ನಡೆಸುವ ಒಂದು ಮುಕ್ತ ಮತ್ತು ಸ್ವತಂತ್ರ ವಿಶ್ವಕೋಶ. ಇದಕ್ಕೆ ಯಾರು ಬೇಕಾದರೂ ಸಂಪಾದಕರಾಗಿ ಲೇಖನ ಸೇರಿಸಬಹುದು. ಇರುವ ಲೇಖನ ತಿದ್ದಬಹುದು. ಇನ್ನೊಬ್ಬರು ಬರೆದ ಲೇಖನದಲ್ಲಿ ಏನಾದರೂ ತಪ್ಪುಗಳು ಕಂಡುಬಂದರೆ ಅಥವಾ ಮಾಹಿತಿಯ ಕೊರತೆ ಇದ್ದಲ್ಲಿ ಆ ಮಾಹಿತಿ ನಿಮ್ಮಲ್ಲಿ ಇದ್ದಲ್ಲಿ ಅದನ್ನು ನೀವೇ ತಿದ್ದಬಹುದು ಮತ್ತು ಹೆಚ್ಚಿನ ಮಾಹಿತಿ ಸೇರಿಸಬಹುದು. ನಿಮಗೆ ಒಂದು ವಿಷಯದ ಬಗ್ಗೆ ಚೆನ್ನಾಗಿ ತಿಳಿದಿದೆ ಮತ್ತು ಆ ವಿಷಯದ ಬಗ್ಗೆ ವಿಕಿಪೀಡಿಯದಲ್ಲಿ ಲೇಖನ ಇಲ್ಲ ಎಂದಾದಲ್ಲಿ ಆ ಬಗ್ಗೆ ಒಂದು ಹೊಸ ಲೇಖನವನ್ನು ನೀವೇ ಸೇರಿಸಬಹುದು. ನಿಮ್ಮ ಲೇಖನ ಯಾರೋ ಒಬ್ಬರು ಒಪ್ಪಿದ ನಂತರ ಅದು ಪ್ರಕಟವಾಗುವ ಪರಿಪಾಠ ಇಲ್ಲಿಲ್ಲ. ನೀವು ಲೇಖನ ಬರೆದು ಪುಟ ಉಳಿಸಿ ಎಂಬುದರ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಲೇಖನ ಕನ್ನಡ ವಿಕಿಪೀಡಿಯಕ್ಕೆ ಸೇರ್ಪಡೆಯಾಗುತ್ತದೆ. ಪ್ರಪಂಚದಾದ್ಯಂತ ಹಬ್ಬಿರುವ ಕನ್ನಡಿಗರಿಗೆ ಅದು ಕ್ಷಣಮಾತ್ರದಲ್ಲಿ ದೊರೆಯುವಂತಾಗುತ್ತದೆ.
ವಿಕಿಪೀಡಿಯ ಆದಾಯರಹಿತ (ನಾನ್ ಪ್ರಾಫಿಟ್) ಸಂಸ್ಥೆಯಾದ ವಿಕಿಮೀಡಿಯ ಫೌಂಡೇಶನ್‌ನ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಸರ್ಕಾರಿ ಸಂಸ್ಥೆಯಲ್ಲ, ಸರ್ಕಾರದಿಂದ ಯಾವುದೇ ರೀತಿಯ ಅನುದಾನವನ್ನೂ ಪಡೆಯುತ್ತಿಲ್ಲ. ಈ ಯೋಜನೆಗೆ ಅವಶ್ಯಕವಾದ ಬಂಡವಾಳವನ್ನು ವಿಕಿಪೀಡಿಯದ ಸಾಮಾನ್ಯ ಬಳಕೆದಾರರಿಂದ ದೇಣಿಗೆಯ ರೂಪದಲ್ಲಿ ಸಂಗ್ರಹಿಸಲಾಗಿದೆ. ವಿಕಿಪೀಡಿಯ ನಡೆಸಲು ನೀವೂ ಧನಸಹಾಯ ನೀಡಬಹುದು. ಇಂದು ವಿಕಿಪೀಡಿಯ ಇಷ್ಟು ಜನಪ್ರಿಯವಾಗಿರುವ ಕಾರಣ ಕೆಲವು ಸರ್ಕಾರಿ ಹಾಗೂ ಕಾರ್ಪೊರೇಟ್ ಸಂಸ್ಥೆಗಳು ಕೂಡ ಧನಸಹಾಯ ನೀಡಲು ಮುಂದಾಗಿವೆ.
ವಿಕಿಪೀಡಿಯದಲ್ಲಿ ಮಾಹಿತಿ ಸೇರಿಸುವುದಕ್ಕೆ ನಾವು ತಜ್ಞರೇ ಆಗಿರಬೇಕು ಎನ್ನುವುದು ತಪ್ಪು. ವಾಸ್ತವವಾಗಿ ವಿಕಿಪೀಡಿಯದ ಯಾವುದೇ ಬರಹ ಒಬ್ಬನೇ ಲೇಖಕ ಬರೆದುದಲ್ಲ. ಬೇರೆ ಬೇರೆ ದೇಶ, ಹಿನ್ನೆಲೆಗಳ ಅನೇಕ ಮಂದಿಯ ಸಹಕಾರದಲ್ಲಿ ಪ್ರತಿಯೊಂದು ಪುಟವೂ ರೂಪುಗೊಳ್ಳುತ್ತದೆ. ವಿಕಿಪೀಡಿಯ ಒಂದು ಸಹಯೋಗಿ ವಿಶ್ವಕೋಶ. ನಿಮಗೆ ತಿಳಿದಷ್ಟು ನೀವು ಸೇರಿಸಿ. ನೀವು ಬಿಟ್ಟಿರುವುದನ್ನು ವಿಷಯ ತಿಳಿದ ಬೇರೆ ಯಾರಾದರು ಸೇರಿಸುತ್ತಾರೆ.
ಕನ್ನಡ ವಿಕಿಪೀಡಿಯದಲ್ಲಿ ಬರೆಯುವುದರಿಂದ ಯಾವುದೇ ಆರ್ಥಿಕ ಲಾಭವಿಲ್ಲ. ಲೇಖಕರ ಹೆಸರನ್ನೂ ಲೇಖನದ ಕೆಳಗೆ ಬರೆಯುವ ಪರಿಪಾಠವಿಲ್ಲ. ವಿಕಿಪೀಡಿಯದಲ್ಲಿ ಬರೆಯುವುದೆಂದರೆ ನಿಜವಾದ ಸ್ವಾರ್ಥರಹಿತ ಸಮಾಜಸೇವೆ. ನಮ್ಮ ಭಾಷೆಯ ಉಳಿವಿಗೆ ಇದು ಅತೀ ಅಗತ್ಯ. ಆದ್ದರಿಂದ ಇಂದೇ ಕೀಲಿಮಣೆ ಮೇಲೆ ಕುಟ್ಟಿ -- kn.wikipedia.org.