You are here: Home / Openness / News & Media / ಭಾಷಣದಿಂದ ಭಾಷೆ ಉಳಿಯಲ್ಲ, ಕನ್ನಡದಲ್ಲೇ ಮಾಹಿತಿ ಸಿಗುವುದು ಅಗತ್ಯ: ಪವನಜ

ಭಾಷಣದಿಂದ ಭಾಷೆ ಉಳಿಯಲ್ಲ, ಕನ್ನಡದಲ್ಲೇ ಮಾಹಿತಿ ಸಿಗುವುದು ಅಗತ್ಯ: ಪವನಜ

by Prasad Krishna last modified Dec 06, 2014 02:30 AM
Media coverage of Kannada Wikipedia presentation at Mysuru on November 23, 2014.

The article was published in Just Kannada on November 23, 2014.


ಮೈಸೂರು, ನ.23 :  ಧ್ವಜ ಹಾರಿಸಿ ಭಾಷಣ ಮಾಡಿದರೆ ಕನ್ನಡ ಭಾಷೆ ಉಳಿಯುವುದಿಲ್ಲ. ಬದಲಿಗೆ ಕನ್ನಡಲ್ಲೇ ಎಲ್ಲಾ ಮಾಹಿತಿಗಳು ಸಿಗುವಂತೆ ಮಾಡುವುದು ಅಗತ್ಯವಿದೆ ಎಂದು ಬೆಂಗಳೂರಿನ ಭಾರತೀಯ ಭಾಷೆಗಳು, ಸಮಾಜ ಮತ್ತು ಅಂತರ್ಜಾಲ ಕೇಂದ್ರದ ಕಾರ್ಯಕ್ರಮ ವ್ಯವಸ್ಥಾಪಕ ಡಾ.ಯು.ಬಿ.ಪವನಜ ತಿಳಿಸಿದರು.

ವಿಸ್ಮಯ ಫೌಂಡೇಶನ್ ಭಾನುವಾರ ಕುವೆಂಪುನಗರದ ಉದಯರವಿ ರಸ್ತೆ ಕಲಾಸುರುಚಿಯಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ `ಕನ್ನಡ ವಿಕಿಪಿಡಿಯ: ಒಂದು ಪರಿಚಯ’ ಕುರಿತು ಮಾತನಾಡಿದರು.
ಕನ್ನಡ ವಿನಾಶದ ಹಾದಿಯತ್ತ ಸಾಗುತ್ತಿದೆ. ಇಂದು ಕೇವಲ ಕಥೆ, ಕಾದಂಬರಿಗಳಿಂದ ಮಾತ್ರ ಕನ್ನಡ ಉಳಿಯುವುದಿಲ್ಲ ವಿಕಿಪೀಡಿಯದಂತಹ ತಂತ್ರಜ್ಞಾನಗಳನ್ನು ಬಳಸಿಕೊಳ್ಳಬೇಕು. ಕನ್ನಡ ರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆಗಳಲ್ಲಿ ಧ್ವಜ ಹಾರಿಸಿ, ಭಾಷಣ ಮಾಡಿದರೆ ಕನ್ನಡ ಉಳಿಯುವುದಿಲ್ಲ. ಬದಲಾಗಿ ಅಗತ್ಯ ಮಾಹಿತಿಗಳು ಕನ್ನಡದಲ್ಲೇ ಸಿಕ್ಕಿದರೆ ಕನ್ನಡ ಉಳಿಯುತ್ತದೆ ಎಂದರು. ದೇಶ-ವಿದೇಶಗಳ ಭಾಷೆ, ಸಂಸ್ಕೃತಿಗಳ ಬಗ್ಗೆ ತಿಳಿದು ಕೊಳ್ಳುತ್ತಿದ್ದಾರೆ. ನಮ್ಮಲ್ಲಿ ಕನ್ನಡ ಮಾಹಿತಿ ಸಾಹಿತ್ಯ ಕಡಿಮೆ ಇದೆ. ಕನ್ನಡಿಗರು ಕನ್ನಡ ಮಾಹಿತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಹುಡುಕುವ ಮುನ್ನವೇ ಅಗತ್ಯ ಮಾಹಿತಿ ಒದಗಿಸಿದರೆ ಕನ್ನಡ ಉಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಭಾರತೀಯ ವಿಕಿಪಿಡಿಯದಲ್ಲಿ 20ಕ್ಕೂ ಹೆಚ್ಚು ಭಾಷೆಗಳಿವೆ. ತಿಂಗಳಿಗೆ 50 ಕೋಟಿ ಹೊಸ ವೀಕ್ಷಕರು ಭೇಟಿ ನೀಡುತ್ತಾರೆ. ಇದರಲ್ಲಿ ಏಳು ಸಾವಿರ ಸಂಪಾದಕರಿದ್ದಾರೆ. ಜೊತೆಗೆ ಇದೇ ಮಾದರಿಯಲ್ಲಿ ಜೂ.2003ರಲ್ಲಿ ಕನ್ನಡ ವಿಕಿಪಿಡಿಯ ಆರಂಭಗೊಂಡಿದ್ದು, ಅಲ್ಲಿಂದ ಇಲ್ಲಿಯವರೆಗೆ 18 ಸಾವಿರ ಲೇಖನಗಳು, 622 ಸಂಪಾದಕರು ಇದ್ದಾರೆ. ಅದರಲ್ಲಿ 22 ಮಂದಿ ಸಕ್ರಿಯ ಸಂಪಾದಕರು ಹಾಗೂ ನಾಲ್ಕು ಮಂದಿ ಅತಿ ಸಕ್ರಿಯ ಸಂಪಾದಕರಿದ್ದಾರೆ. ತಿಂಗಳಿಗೆ 18.50 ಲಕ್ಷ ಜನ ಕನ್ನಡ ವಿಕಿಪಿಡಿಯ ಪುಟ ವೀಕ್ಷಣೆ ಮಾಡುತ್ತಾರೆ ಎಂದು ಮಾಹಿತಿ ನೀಡಿದರು.

ನಾವಷ್ಟೇ ಅಲ್ಲ ಲಕ್ಷಾಂತರ ಮಂದಿ ತಂತ್ರಜ್ಞಾನ(ವಿಕಿಪಿಡಿಯ, ಅಂತರ್ಜಾಲ)ಕ್ಕೆ ಹೊಂದಿಕೊಂಡಿದ್ದಾರೆ. ಕನ್ನಡ ಕಲಿಯುವವರಿಗೆ, ಭಾಷಾಭಿಮಾನಿಗಳಿಗೆ ಹಾಗೂ ಅಗತ್ಯ ಮಾಹಿತಿ ಹುಡುಕುವವರಿಗೆ ವಿಕಿಪಿಡಿಯದಲ್ಲಿ ಕನ್ನಡ ಸಾಹಿತ್ಯ ಸೃಷ್ಟಿ ಮಾಡಬೇಕು. ಜನರಿಂದ ಜನರಿಗಾಗಿ ಜನರೇ ನಡೆಸುವ ವಿಶ್ವಕೋಶಕ್ಕೆ ಅಗತ್ಯ ಮಾಹಿತಿಗಳನ್ನು ಅಳವಡಿಕೆ ಮಾಡಬೇಕು ಎಂದ ಅವರು, ಕನ್ನಡ ಭಾಷೆ ಹಾಗೂ ಸಂಸ್ಕೃತಿ, ಸಂಸ್ಕಾರಗಳನ್ನು ಅನ್ಯರಿಗೂ ಪರಿಚಯಿಸುವ ನಿಟ್ಟಿನಲ್ಲಿ ಕನ್ನಡ ವಿಕಿಪೀಡಿಯವನ್ನು ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.

ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿವೃತ್ತ ಪ್ರಾಧ್ಯಾಪಕ ಪ್ರೊ.ಆರ್ವಿಯಸ್ ಸುಂದರಂ ಮಾತನಾಡಿ, ಒಂದು ಸಾವಿರ ವರ್ಷಗಳಿಂದ ಒಂದು ವರ್ಷವೂ ಎಡಬಿಡದೆ ಬರೆಯುತ್ತಿರುವ, ಕಲಿಯುತ್ತಿರುವ ಭಾಷೆ ಕನ್ನಡ. ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸ, ಪರಂಪರೆ ಇದೆ. ಒಂದೊಂದು ಶತಮಾನದವರೆಗೂ ಕನ್ನಡ ಸಾಹಿತ್ಯ ಅವಿಚ್ಛಿನ್ನವಾಗಿ ಇದೆ. ಇಂತಹ ಭಾಷೆಯ ಬಗ್ಗೆ ನಿರಂತರವಾಗಿ ಪ್ರಚಾರ ಮಾಡಬೇಕು. ಹಾಗೆಯೇ ಆಯಾಯ ಪ್ರದೇಶದಲ್ಲಿ ನೆಲೆಸಿರುವವರು ಅಲ್ಲಿನ ಸ್ಥಳೀಯ ಭಾಷೆಗಳನ್ನು ಕಲಿತುಕೊಳ್ಳಬೇಕು ಎಂದು ಮನವಿ ಮಾಡಿದರು.

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ನಿವೃತ್ತ ಕಾರ್ಯನಿರ್ವಾಹಕ ಸಂಪಾದಕ ಡಾ.ಹಾ.ತಿ.ಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು. ವಿಸ್ಮಯ ಫೌಂಡೇಶನ್ ಸಂಸ್ಥಾಪಕ ಸೋಮಶೇಖರ್ ಇದ್ದರು.