ಬೆಳ್ತಂಗಡಿ:ಎಲ್ಲಾ ಕಾಲಕ್ಕೂ ಲಭ್ಯ ಇರುವ ಸ್ವತಂತ್ರ ಹಾಗೂ ಮುಕ್ತ ವಿಶ್ವಕೋಶ ವಿಕಿಪೀಡಿಯಾ-ಪವನಜ
Read the online entry published by SahilOnline on August 14, 2015.
ಬೆಳ್ತಂಗಡಿ: ವಿಕಿಪಿಡಿಯಾ ಎಲ್ಲರಿಗೂ ಎಲ್ಲಾ ಕಾಲಕ್ಕೂ ಲಭ್ಯ ಇರುವ ಸ್ವತಂತ್ರ ಹಾಗೂ ಮುಕ್ತ ವಿಶ್ವಕೋಶವಾಗಿದೆ. ಉಪಯುಕ್ತ ಬರವಣಿಗೆಗಳ ಕೋಶವನ್ನು ಹೊಂದಿದ ಇದನ್ನು ಯಾರು ಬೇಕಾದರೂ ಮುಕ್ತವಾಗಿ ಬಳಸಬಹುದು ಎಂದು ಪತ್ರಿಕಾ ಅಂಕಣಕಾರ ಬೆಂಗಳೂರಿನ ಡಾ. ಯು. ಬಿ. ಪವನಜ ಹೇಳಿದರು.
ಅವರು ಗುರುವಾರ ಉಜಿರೆ ಎಸ್.ಡಿ.ಎಮ್. ಸ್ವಾಯತ್ತ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ವಿಕಿಪಿಡಿಯಾ ಬರವಣಿಗೆ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು.
2001ರಲ್ಲಿ ಅಮೇರಿಕಾದಲ್ಲಿ ಪ್ರಾರಂಭಗೊಂಡ ವಿಕಿಪಿಡಿಯಾ ಪ್ರಪಂಚದ 290 ಭಾಷೆಗಳಲ್ಲಿ ಲಭ್ಯ ಇದೆ. ದೇಶದ 20 ಭಾಷೆಗಳಲ್ಲಿ ಲೇಖನಗಳನ್ನು ಒಳಗೊಂಡಿದೆ. 2003ರಲ್ಲಿ ಕನ್ನಡದಲ್ಲಿಯೂ ವಿಕಿಪಿಡಿಯಾ ಬರವಣಿಗೆ ಪ್ರಾರಂಭವಾಗಿದೆ. ಕೇವಲ 20 ಸಾವಿರ ಲೇಖನಗಳು ಇದೆ. ಬೇರೆ ಭಾಷೆಗಳಿಗೆ ಹೋಲಿಸಿದರೆ ಕಡಿಮೆ ಅನ್ನಿಸುತ್ತದೆ. ಕನ್ನಡದಲ್ಲಿ ಪ್ರಬುದ್ಧತೆಯ ಬರವಣಿಗೆ ಶೈಲಿಯನ್ನು ಸುಧಾರಿಸಿಕೊಳ್ಳಲು ಇದೊಂದು ಸುಲಭದ ಮಾಧ್ಯಮ. ವಿದ್ಯಾರ್ಥಿಗಳು ಸಂಶೋಧನಾ ಪ್ರವೃತ್ತಿ ಮತ್ತು ಕೌಶಲ ಬೆಳೆಸಿಕೊಳ್ಳಬೇಕು ಎಂದರು.
ವಿಕಿಪಿಡಿಯಾ ಬಳಕೆಯಿಂದ ನಮ್ಮ ಭಾಷೆ ಮತ್ತು ಶೈಲಿ ಸುಧಾರಣೆಯಾಗುತ್ತದೆ. ಮಾಹಿತಿ ಸಂಗ್ರಹದೊಂದಿಗೆ ಕ್ರೋಢೀಕರಣ ಮತ್ತು ಉಲ್ಲೇಖವೂ ಅಗತ್ಯ. ಗೂಗಲ್‍ನಲ್ಲಿ ಯಾವುದೇ ಮಾಹಿತಿ ಇರುವುದಿಲ್ಲ. ಮಾಹಿತಿ ಎಲ್ಲಿ ಸಿಗುತ್ತದೆ ಎಂದು ಮಾತ್ರ ಅದು ಸೂಚಿಸುತ್ತದೆ. ಯಾವುದೇ ಪ್ರಕರಣ ಘಟಿಸಿದ ತಕ್ಷಣ ವಿಕಿಪಿಡಿಯಾದಲ್ಲಿ ಅದು ನವೀಕರಣ ಆಗುತ್ತದೆ. ಪತ್ರಕರ್ತರು ನಿರಂತರ ಅಧ್ಯಯನಶೀಲರಾಗಿ ಮಾಹಿತಿ ಸಂಗ್ರಹಿಸಬೇಕು. ಭಾಷೆ ಬಳಸಿದಾಗ ಅದು ಬೆಳೆಯುತ್ತದೆ ಹಾಗೂ ನಮ್ಮ ಸಂಸ್ಕೃತಿ ಉಳಿಯುತ್ತದೆ ಎಂದರು.
ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ. ಭಾಸ್ಕರ ಹೆಗ್ಡೆ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅರಹಂತ ಸ್ವಾಗತಿಸಿ, ಚೇತನ್ ಕಾರ್ಯಕ್ರಮ ನಿರ್ವಹಿಸಿದರು.