You are here: Home / Access to Knowledge / Blogs / ವಿಕಿಪೀಡಿಯ ತರಬೇತಿ ೨೦೧೮ @ ರಾಂಚಿ

ವಿಕಿಪೀಡಿಯ ತರಬೇತಿ ೨೦೧೮ @ ರಾಂಚಿ

Posted by Vikas Hegde at Jul 04, 2018 04:30 PM |
ಕನ್ನಡ ವಿಕಿಪೀಡಿಯನ್ನರಾದ ವಿಕಾಸ್ ಹೆಗಡೆ ಅವರು Wiki Advanced Training 2018ರ ತಮ್ಮ ಅನುಭವ ಮತ್ತು ಕಲಿತ ವಿಚಾರಗಳನ್ನು ಈ ಬ್ಲಾಗಿನಲ್ಲಿ ಬರೆದುಕೊಂಡಿದ್ದಾರೆ.
ವಿಕಿಪೀಡಿಯ ತರಬೇತಿ ೨೦೧೮ @ ರಾಂಚಿ

ಕನ್ನಡ ಸಮುದಾಯದ ಪರವಾಗಿ ನಾನು ಮತ್ತು ಮಲ್ಲಿಕಾರ್ಜುನ್

 

ಈ ಬಾರಿ ಜಾರ್ಖಂಡ್ ರಾಜ್ಯದ ’ರಾಂಚಿ’ ನಗರದಲ್ಲಿ ವಿಕಿಪೀಡಿಯಾದ ’ಮುಂದುವರೆದ ತರಬೇತಿ ಕಾರ್ಯಾಗಾರ’ವನ್ನು (Wikipedia Advanced Training, 2018) ಆಯೋಜಿಸಲಾಗಿತ್ತು. ವಿಕಿಪೀಡಿಯಾ ಒಂದು ಸ್ವತಂತ್ರ ವಿಶ್ವಕೋಶವಾಗಿದ್ದು ನಾನು ಕನ್ನಡ ವಿಕಿಪೀಡಿಯಾಗೆ ಮಾಹಿತಿ ತುಂಬುವ ಕೆಲಸವನ್ನು ಹಲವು ವರ್ಷಗಳಿಂದ ಮಾಡುತ್ತಾ ಬಂದಿದ್ದೇನೆ. ವಿಕಿಗೆ ಸಾಮಾನ್ಯವಾಗಿ ಮಾಹಿತಿ ತುಂಬಿಸಲು ಬೇಸಿಕ್ ಮಟ್ಟದ ಎಡಿಟಿಂಗ್ ತಿಳುವಳಿಕೆ ಸಾಕಾಗುತ್ತದೆ. ಆದರೆ ಹಾಗೇ ಮುಂದುವರೆಯುತ್ತಾ ಹೋದಂತೆ ಅದರಲ್ಲಿ ಕಲಿಯಲು ಮತ್ತು ತಿಳಿದುಕೊಳ್ಳಲು ಬಹಳಷ್ಟಿರುತ್ತದೆ. ಉತ್ತಮ ಗುಣಮಟ್ಟದ ಲೇಖನಗಳನ್ನು, ಪುಟಗಳನ್ನು ತಯಾರಿಸಲು ಹಲವು ವಿಷಯಗಳನ್ನು ತಿಳಿದುಕೊಂಡು ಅದಕ್ಕೆ ತಕ್ಕುದಾಗಿ ವಿಕಿಪೀಡಿಯಾದಲ್ಲಿ ಮಾಹಿತಿಗಳನ್ನು ತುಂಬಿಸಬೇಕಾಗುತ್ತದೆ. ಅನೇಕ ವಿಷಯಗಳಿಗೆ ಒಂದು ಮಟ್ಟದ ತಾಂತ್ರಿಕ ಜ್ಞಾನ ಅಥವಾ ಅದನ್ನು ಅರ್ಥಮಾಡಿಕೊಳ್ಳುವ ಆಸಕ್ತಿ ಅಗತ್ಯ.

ವಿಕಿಪೀಡಿಯಾಗೆ ಸಂಬಂಧಿಸಿದಂತೆ ತರಬೇತಿ, ಸಮುದಾಯ ಕಟ್ಟುವಿಕೆ ಮುಂತಾದ ಚಟುವಟಿಕೆಗಳನ್ನು ಬೆಂಬಲಿಸುತ್ತಿರುವ ಸೆಂಟರ್ ಫಾರ್ ಇಂಟರ್ನೆಟ್ ಅಂಡ್ ಸೊಸೈಟಿ-A2K ವಿಭಾಗವು ಈ ಮುಂದುವರೆದ ವಿಕಿಪೀಡಿಯ ತರಬೇತಿ ಬಗ್ಗೆ ಹಿಂದಿನ ತಿಂಗಳು ಘೋಷಣೆ ಮಾಡಿತ್ತು. ಇದು ಮೂರು ದಿನಗಳ ಕಾಲ ನಡೆಯುವ ತರಬೇತಿಯಾಗಿದ್ದು ಎಲ್ಲಾ ಭಾರತೀಯ ಭಾಷೆಗಳ ವಿಕಿಪೀಡಿಯರನ್ನ ಆಹ್ವಾನಿಸಲಾಗಿತ್ತು. ಹಿಂದೆ ಕೆಲಬಾರಿ ಬೇರೆಬೇರೆ ಸ್ಥಳಗಳಲ್ಲಿ ಈ ಮುಂದುವರೆದ ತರಬೇತಿಗಳು ನಡೆದಿದ್ದರೂ ಸಹ ನನಗೆ ಹೋಗಲು ಆಗಿರಲಿಲ್ಲ. ಈ ಬಾರಿ ತಾರೀಖುಗಳು ಹೊಂದಾಣಿಕೆಯಾಗುತ್ತಿದ್ದುದರಿಂದ ನಾನು ಕೂಡ ಅರ್ಜಿ ಸಲ್ಲಿಸಿದ್ದೆ. ಅರ್ಜಿ ಸಲ್ಲಿಕೆ ಮತ್ತು ಆಯ್ಕೆಗೆ ವಿಕಿಪೀಡಿಯಾಗೆ ನಾವು ಮಾಡಿದ ಕೆಲಸಗಳಿಗೆ ಸಂಬಂಧಿಸಿದಂತೆ ಕೆಲವು ಮಾನದಂಡಗಳಿದ್ದವು. ಕನ್ನಡ ಸಮುದಾಯದಿಂದ ನಾನು ಮತ್ತು ಮಲ್ಲಿಕಾರ್ಜುನ್ ಆಯ್ಕೆಯಾಗಿರುವುದಾಗಿ ಕೆಲದಿನಗಳ ನಂತರ ತಿಳಿಸಿದರು.

ಈ ಬಾರಿ ಈ ತರಬೇತಿಯನ್ನು ’ರಾಂಚಿ’ಯಲ್ಲಿ ನಡೆಸಲು ಕಾರಣವಿತ್ತು. ಮೊದಲನೆಯದಾಗಿ, ವಿಕಿಪೀಡಿಯಾಗೆ ಬಹಳ ಕೆಲಸ ಮಾಡಿ, ಭಾರತದ ಉತ್ತಮ ವಿಕಿಮೀಡಿಯನ್ ಎಂದು ಗುರುತಿಸಲ್ಪಟ್ಟಿದ್ದ ’ಗಂಗಾಧರ ಭದಾನಿ’ಯವರು ರಾಂಚಿಯವರಾಗಿದ್ದು ಈ ವರ್ಷ ಜನವರಿಯಲ್ಲಿ ನಿಧನರಾಗಿದ್ದರು. ಅವರ ಗೌರವಾರ್ಥವಾಗಿ ರಾಂಚಿಯಲ್ಲಿ ಆಯೋಜನೆಯಾಗಿತ್ತು. ಎರಡನೆಯದಾಗಿ ಭಾರತದ ಪೂರ್ವಭಾಗದಲ್ಲಿ ವಿಕಿಚಟುವಟಿಕೆಗಳನ್ನು ನಡೆಸುವ ಉದ್ದೇಶವೂ ಇತ್ತು. ಜೂನ್ ೨೮ನೇ ತಾರೀಖು ಬೆಂಗಳೂರಿಂದ ಹೊರಟು ರಾಂಚಿಯನ್ನು ತಲುಪಿದೆವು. ವಿಮಾನ ನಿಲ್ದಾಣದಿಂದ ಎಂಟು ಕಿಮೀ ದೂರದಲ್ಲಿರುವ ’ಲೇ ಲ್ಯಾಕ್ ಸರೋವರ್ ಪೋರ್ಟಿಕೊ’ ಹೋಟೆಲ್ ತಲುಪಿದೆವು. ತಮಿಳು, ತೆಲುಗು, ಮಲಯಾಳಂ, ಬೆಂಗಾಳಿ, ಹಿಂದಿ, ಮರಾಠಿ, ಪಂಜಾಬಿ, ಗುಜರಾತಿ, ಸಂಸ್ಕೃತ, ಒಡಿಯಾ, ಇಂಗ್ಲೀಷ್ ವಿಕಿಪೀಡಿಯನ್ನರೂ ಸೇರಿ ಒಟ್ಟು ಮೂವತ್ತು ಜನ ಬಂದಿದ್ದರು.  ಅಂದು ಸಂಜೆ ಪೂರ್ವಭಾವಿ ಸೆಶನ್ ಇತ್ತು. ಪರಸ್ಪರ ಪರಿಚಯ, ತರಬೇತಿ ಕಾರ್ಯಕ್ರಮದ ಬಗ್ಗೆ ಮಾಹಿತಿ, ಕಾರ್ಯಸೂಚಿ ಇತ್ಯಾದಿಗಳನ್ನು ಕೊಡಲಾಯಿತು.

ಮಾರನೆಯ ದಿನ ಬೆಳಗ್ಗೆ ಹತ್ತು ಗಂಟೆಗೆ ಶುರುವಾದ ತರಬೇತಿಯು ನಡುವಿನ ಚಹಾ ವಿರಾಮ ಮತ್ತು ಊಟದ ವಿರಾಮದೊಂದಿಗೆ ಸಂಜೆಯವರೆಗೂ ನಡೆಯಿತು. ವಿಕಿಗೆ ಸಂಬಂಧಿಸಿದಂತೆ ಹಲವು ವಿಷಯಗಳ ಬಗ್ಗೆ, ಟೂಲ್ ಗಳ ಬಗ್ಗೆ ತಿಳಿಸಿಕೊಡಲಾಯಿತು. ಬೇರೆ ಬೇರೆ ಭಾಷೆಯ ವಿಕಿಪೀಡಿಯನ್ನರು ಅವರ ಭಾಷೆಯ ವಿಕಿಪೀಡಿಯಾಗಳ ಬಗ್ಗೆ, ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಮಾಹಿತಿ, ಅನುಭವಗಳನ್ನು ಹಂಚಿಕೊಂಡರು. ಹಿರಿಯ ವಿಕಿಪೀಡಿಯನ್ನರಾಗಿದ್ದ ಗಂಗಾಧರ ಬದಾನಿಯವರ ಕುಟುಂಬವನ್ನು ಸಂಜೆ ಆಹ್ವಾನಿಸಲಾಗಿತ್ತು. ಭದಾನಿಯವರ ಸ್ಮರಣಾರ್ಥವಾಗಿ ಒಂದು ಚಿಕ್ಕ ಸಭೆ ನಡೆಸಿ ಗೌರವ ಸಲ್ಲಿಸಲಾಯಿತು. ಇಂಗ್ಲೀಷ್ ವಿಕಿಪೀಡಿಯಾದಲ್ಲಿ ಅವರು ಮಾಡಿದ ಎಡಿಟ್ ಎಣಿಕೆ ಎರಡೂವರೆ ಲಕ್ಷಕ್ಕೂ ಮೀರಿದ್ದು ಆ ವಯಸ್ಸಿನಲ್ಲಿ ಅವರು ಸಲ್ಲಿಸಿದ ಕಾಣಿಕೆ ಮತ್ತು ಅನೇಕ ಕಿರಿಯ ವಿಕಿಪೀಡಿಯನ್ನರಿಗೆ ಕೊಟ್ಟ ಪ್ರೋತ್ಸಾಹಗಳನ್ನು ನೆನಪಿಸಿಕೊಳ್ಳಲಾಯಿತು.  

ಮೊದಲ ದಿನದ ತರಬೇತಿಯಲ್ಲಿ ಸಮಯದ ಅಭಾವದಿಂದ ಎರಡ್ಮೂರು ವಿಷಯಗಳು ಬಿಟ್ಟುಹೋದದ್ದರಿಂದ ಅನಂತರದ ದಿನ ಬೆಳಗ್ಗೆ ಒಂಬತ್ತು ಗಂಟೆಗೇ ಸೇರಿದೆವು. ಅಂದು ಕೂಡ ಹಲವು ತರಬೇತಿ ಮತ್ತು ಮಾಹಿತಿ ಸೆಶನ್ ಗಳು ನಡೆದವು. ಆಯಾ ವಿಕಿಪೀಡಿಯನ್ನರು ತಮ್ಮ ಭಾಷೆಯ ವಿಕಿಗಾಗಿ ಮುಂದೆ ಯಾವ ರೀತಿ ಯೋಜನೆಗಳನ್ನು ಹಮ್ಮಿಕೊಳ್ಳಲು ಬಯಸುತ್ತಾರೆ ಎಂಬುದನ್ನು ಪ್ರೆಸೆಂಟ್ ಮಾಡಲು ಹೇಳಲಾಯಿತು. ಕನ್ನಡ ವಿಕಿಪೀಡಿಯಕ್ಕಾಗಿ ಹಾಕಿಕೊಳ್ಳಬಹುದಾದ ಯೋಜನೆಯ ಬಗ್ಗೆ ನಾವು ಪ್ರೆಸೆಂಟ್ ಮಾಡಿದೆವು.  ಕೆಲವು hands on activityಗಳು ನಡೆದವು.

ಕೊನೆಯ ದಿನದ ತರಬೇತಿ ಅರ್ಧ ದಿನಕ್ಕೆ ಮಾತ್ರ ಸೀಮಿತವಾಗಿದ್ದು ಒಂದೆರಡು ವಿಷಯಗಳ ಮಾಹಿತಿ ಹಂಚಿಕೆ ನಡೆಯಿತು. ಎರಡು ದಿನಗಳಲ್ಲಿ ನಡೆದ ತರಬೇತಿಯ ವಿಷಯಗಳ ಬಗ್ಗೆ ಮೆಲುಕು, ಬೇಕಾದಲ್ಲಿ ಹೆಚ್ಚಿನ ಮಾಹಿತಿ, ಮುಂದಿನ ಯೋಜನೆಗಳ ಬಗ್ಗೆ ಮಾತುಕತೆ, ಅಭಿಪ್ರಾಯ, ಹಿನ್ನುಣಿಕೆಗಳನ್ನು ಹಂಚಿಕೊಳ್ಳಲಾಯಿತು.

ಬೇರೆ ಬೇರೆ ರಾಜ್ಯಗಳಿಂದ ಬಂದಿದ್ದ ವಿಕಿಪೀಡಿಯನ್ನರು ಮಧ್ಯಾಹ್ನ ವಾಪಸ್ ಹೊರಟರು. ನಾವು ಕೂಡ ಎರಡು ಗಂಟೆಗೆ ಅಲ್ಲಿಂದ ಹೊರಟು ನಾಲ್ಕೂ ಇಪ್ಪತ್ತರ ವಿಮಾನದಲ್ಲಿ ಸಂಜೆ ಆರೂವರೆ ವೇಳೆಗೆ ಬೆಂಗಳೂರು ವಿಮಾನ ನಿಲ್ದಾಣ ತಲುಪಿದೆವು. ಭಾರತದ ವಿವಿಧ ಭಾಗಗಳ, ಬೇರೆ ಬೇರೆ ಭಾಷೆಗಳ ವಿಕಿಪೀಡಿಯರೊಡನೆ ಸಂವಾದ, ಹಲವು ಹೊಸ ವಿಷಯಗಳ ಬಗ್ಗೆ ತಿಳಿದುಕೊಂಡಿದ್ದು, ಕಲಿತುಕೊಂಡಿದ್ದು, ತೆಲುಗು, ತಮಿಳಿನ ಹಿರಿಯ ವಿಕಿಪೀಡಿಯನ್ನರ ಭೇಟಿಗಳು ಒಟ್ಟಾರೆ ಒಳ್ಳೆಯ ಅನುಭವ, ಖುಷಿ ಕೊಟ್ಟಿತು. ಕನ್ನಡ ವಿಕಿಮೀಡಿಯ ಯೋಜನೆಗಳಿಗೆ ಹೆಚ್ಚಿನ ಕೆಲಸ ಮಾಡಲು ಈ ತರಬೇತಿ ಶಿಬಿರವು ಉತ್ಸಾಹ ತುಂಬಿತು.

 


 

Link to Vikas Hegde's blogpost